ಬೀದರ್/ ಚಿಟಗುಪ್ಪ : ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ವ್ಯಕ್ತಿತ್ವದಲ್ಲಿ ಬದಲಾವಣೆ, ಸಮಾಜ ವಿರೋಧಿ ನಡವಳಿಕೆ, ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರೊಂದಿಗೆ, ಕಾನೂನುಬಾಹಿರ ಚಟುವಟಿಕೆಗಳಿಗೂ ಉತ್ತೇಜನ ದೊರೆಯಲಿದೆ ಮತ್ತು ಆರ್ಥಿಕ ಸಂಕಷ್ಟ ತಂದೊಡ್ಡಬಹುದು ಎಂದು ಸಾಹಿತಿ, ಪರಿಸರ ಸಂರಕ್ಷಕ ಸಂಗಮೇಶ ಎನ್ ಜವಾದಿ ಹೇಳಿದರು.
ತಾಲೂಕಿನ ಕೊಡಂಬಲ ಗ್ರಾಮದ ವಿಶ್ವ ಭಾರತಿ ಪ್ರೌಡಶಾಲೆಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ಮನುಷ್ಯನು ಸಾಮಾನ್ಯವಾಗಿ ಅನೇಕ ಚಟ ಅಥವಾ ದುರಭ್ಯಾಸಗಳನ್ನು ಬೆಳೆಸಿಕೊಂಡಿರುತ್ತಾನೆ . ಇಲ್ಲಿ ಚಟ ಎಂದರೆ ಇಷ್ಟು ದೊರಕಿದರೆ ಅಷ್ಟು ಬೇಕೆಂಬ ಆಸೆ . ಅಷ್ಟು ದೊರಕಿದರೆ ಮತ್ತಷ್ಟು ಬೇಕೆಂಬ ಆಸೆಯನ್ನು ಹುಟ್ಟಿಸುವ ಪದಾರ್ಥಗಳನ್ನು ಸೇವಿಸುವ ಅಭ್ಯಾಸ . ಆ ವಸ್ತುವಿನ ಸೇವನೆಗೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಕ್ರಿಯೆಗಳೆಲ್ಲಾ ಒಗ್ಗಿ ಹೋಗಿರುತ್ತವೆ . ಇಂದು ಇಂಥ ಅನೇಕ ಚಟಗಳಿಗೆ ನಮ್ಮ ಸಮಾಜವು ಬಲಿಯಾಗಿದೆ.
ಅತಿಯಾದರೆ ಅಮೃತವೂ ವಿಷ ಎಂದು ಹೇಳುತ್ತಾರೆ. ಹಾಗಾಗಿ ಈ ಮಾದಕ ವಸ್ತುಗಳಿಂದ ಸಾಕಷ್ಟು ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ.
ಅಮಲು ಪದಾರ್ಥಗಳ ಸೇವನೆಯು ಕೆಲವು ನಿಮಿಷಗಳ ಕಾಲ ಆನಂದವನ್ನು ನೀಡುತ್ತದೆ ಆದರೆ ಇದು ದೂರಗಾಮಿ ಅಡ್ಡ ಪರಿಣಾಮಗಳನ್ನು ಹೊಂದಿದೆ. ಅದು ವ್ಯಕ್ತಿಯನ್ನು ನಿಧಾನವಾಗಿ ನುಂಗುತ್ತದೆ ಮತ್ತು ಅವನ ಜೀವನವನ್ನು ಎಲ್ಲಾ ರೀತಿಯಲ್ಲಿ ಹಾಳುಮಾಡುತ್ತದೆ.
ವಿದ್ಯಾರ್ಥಿಗಳು ಈ ವಿಷಯದಲ್ಲಿ ತಾವು ಸಾಕಷ್ಟು ಎಚ್ಚರಿಕೆಯಿಂದ ಇದ್ದು ಬೇರೆಯವರನ್ನು ಎಚ್ಚರಿಸಬೇಕು . ಯಾವುದೋ ಕಾರಣಗಳಿಂದ ಕೆಲವರು ದುಶ್ಚಟಗಳಿಗೆ ಬಲಿಯಾಗಿರಬಹುದು . ಅಂತಹವರ ಪ್ರೀತಿ – ವಿಶ್ವಾಸಗಳಿಂದ ಗೆದ್ದು , ಅವರಲ್ಲಿ ಅನುಕಂಪವನ್ನು ತೋರಬೇಕು.
ಅವರನ್ನು ಸರಿ ದಾರಿಗೆ ತರಬೇಕು . ಟೀಕಿಸುವುದು , ಹೀಯಾಳಿಸುವುದು , ಕೆಟ್ಟ ನೋಟದಿಂದ ನೋಡುವುದು ತರವಲ್ಲ . ಸಮಾಜ ಜಾಗೃತಿಯ ಕೆಲಸವನ್ನು ವೈಯಕ್ತಿಕವಾದ ಆಸ್ಥೆ , ಶ್ರದ್ಧೆಗಳು , ಮಾನವೀಯ ದೃಷ್ಟಿ ಕೋನಗಳು , ಎಷ್ಟೇ ಸಲ ಇಂತಹ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನೆರವಾಗುತ್ತವೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕಿ ಶಾರದಾ ಮಾತನಾಡಿ ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.ಈ ಮಾದಕ ವಸ್ತುಗಳ ಸೇವನೆಯಿಂದ ದೂರ ಉಳಿಯಬೇಕಿದೆ. ಇವುಗಳ ಬಗ್ಗೆ ಯುವಕರು ಮತ್ತು ಮಕ್ಕಳು ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧಿಕಾರಿ ಭೀಮಶಾ ಭೋಸಗಿ ಮಾತನಾಡಿ ಮಾದಕ ವಸ್ತುಗಳ ಚಟ ಯುವ ಜನರಿಗೆ ಬೇಗ ಹತ್ತುತ್ತದೆ. ಮೊದಲು ಉಚಿತ ಎಂದು ನಿಮ್ಮನ್ನು ಬಲೆಗೆ ಬೀಳಿಸಿಕೊಂಡು ನಂತರ ಸಾವಿರಾರು ರೂಪಾಯಿ ವಸೂಲಿ ಮಾಡಿ ನಿಮ್ಮ ಭವಿಷ್ಯವನ್ನು ಹಾಳು ಮಾಡಲಾಗುತ್ತದೆ. ಮಾದಕ ವಸ್ತುಗಳ ಸೇವನೆ ನಮ್ಮ ದೇಹಕ್ಕಷ್ಟೇ ಅಲ್ಲದೇ ಸಾಮಾಜಿಕ ಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಇದರ ಬಗ್ಗೆ ದೂರವಿದ್ದು, ಎಲ್ಲರೂ ಜಾಗೃತಿ ವಹಿಸಬೇಕು ಎಂದರು.
ಸುನೀತಾ ಹಲಗೆ ಸ್ವಾಗತಿಸಿದರು.
ನಾಗರಾಜ್ ಹಳಿದೊಡ್ಡಿ ನಿರೂಪಿಸಿದರು. ರಾಣಿ ಮಂಗಲಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳು ಶಿವಕುಮಾರ ಶೇಹರವಾಲೆ, ಶಿಕ್ಷಕರು, ಶಿಕ್ಷಕಿಯರು, ಸೇವಾ ಪ್ರತಿನಿಧಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















