
ಬಳ್ಳಾರಿ / ಕಂಪ್ಲಿ: ಸೋರುತಿಹುದು ಮನೆಯ ಮಾಳಿಗೆ ಎಂಬಂತೆ ಶಾಲಾ ಕೊಠಡಿಗಳು ಮಳೆ ಬಂದ್ರೆ ಸಾಕು ಸೋರುವ ಮೂಲಕ ಮಕ್ಕಳ ಕಲಿಕೆಗೆ ಅಡ್ಡಿಯಾಗುತ್ತಿದೆ.

ಹೌದು…! ಇದು ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಎದುಗಡೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡಗಳು ಶಿಥಿಲಗೊಂಡಿದ್ದು ವಿದ್ಯಾರ್ಥಿಗಳು ಜೀವ ಭಯದ ನಡುವೆ ಶಿಕ್ಷಣ ಪಡೆಯುವಂತಾಗಿದೆ.
ಸ್ವಾತಂತ್ರ್ಯ ನಂತರದಲ್ಲಿ ಸ್ಥಾಪಿತವಾಗಿರುವ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸದ್ಯ 1ರಿಂದ 7ನೇ ತರಗತಿವರೆಗೆ 177 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಶಾಲೆಯಲ್ಲಿರುವುದು 8 ಕೊಠಡಿಗಳ ಪೈಕಿ ಎರಡು ಕೊಠಡಿ ಹೊರತು ಪಡಿಸಿದರೆ, ಉಳಿದ 6 ಕೊಠಡಿಗಳು ಮಳೆ ನೀರಿಗೆ ಸೋರುವದುಂಟು. ಮತ್ತು ಇಲ್ಲಿನ ಬಹುತೇಕ ಕೊಠಡಿಗಳ ಮೇಲ್ಪದರು ಕಳಚುತ್ತಿದ್ದು, ಜೀವ ಭಯದಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಆತಂಕದಲ್ಲಿ ಶಿಕ್ಷಕರು ಪಾಠ, ಪ್ರವಚನ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಮಕ್ಕಳ ಸಂಖ್ಯೆಗನುಣವಾಗಿ 9+1 ಶಿಕ್ಷಕರ ಹುದ್ದೆ ಮಂಜೂರಾಗಿತ್ತು. ಆದರೆ, ಈಗ ಮಕ್ಕಳ ಸಂಖ್ಯೆ ಇಳಿಮುಖವಾದ ಹಿನ್ನಲೆ ಪ್ರಭಾರಿ ಮುಖ್ಯಶಿಕ್ಷಕಿ, ಸಹ ಶಿಕ್ಷಕರು ಹಾಗೂ ನಾಲ್ಕು ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಶಿಕ್ಷಕರ ಕೊರತೆ ಕಾಣದಿದ್ದರೂ ದುರಸ್ಥಿಗೊಳಪಟ್ಟ ಕೊಠಡಿಗಳ ಸಮಸ್ಯೆಯೇ ಎದ್ದು ಕಾಣುವಂತಾಗಿದೆ. ಶಾಲೆ ಕೊಠಡಿ ಸೀಲಿಂಗ್ ಕಳಚಿ ಬೀಳುತ್ತಿವೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆಯಾದರೆ ಗೋಡೆ ಮೇಲೆ ನೀರು ಬಂದು ಗೋಡೆಗಳು ತೇವಗೊಳ್ಳುತ್ತಿವೆ. ಇದರ ನಡುವೆ ಮಕ್ಕಳ ಶಿಕ್ಷಣ ಪಡೆಯುವಂತಾಗಿದೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆಗಳಿಗೆ ಮೂಲ ಸೌಕರ್ಯ ಕೊರತೆಯಾಗಿ ಕೊಠಡಿಗಳು ಮಳೆಗೆ ಸೋರಿ ಬೀಳುವ ಹಂತ ತಲುಪಿವೆ. ಮಕ್ಕಳನ್ನು ಈ ಸರ್ಕಾರಿ ಶಾಲೆಗಳಿಗೆ ಹೇಗೆ ಕಳುಹಿಸುವುದು ಎಂದು ಪೋಷಕರು, ಅಧಿಕಾರಿಗಳನ್ನು ಮತ್ತು ಶಿಕ್ಷಕರನ್ನು ಪ್ರಶ್ನಿಸುವಂತಾಗಿದೆ.
ಇಚ್ಚಾಶಕ್ತಿ ಕೊರತೆ : ಕಟ್ಟಡಗಳ ದುರಸ್ತಿ, ನವೀಕರಣ, ಹೊಸ ಕೊಠಡಿ ನಿರ್ಮಾಣಕ್ಕೆ ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಯೋಜನೆ, ಜಿ.ಪಂ, ತಾ.ಪಂ ವಿವಿಧ ಯೋಜನೆಯಡಿ ಅನುದಾನ ಮಂಜೂರು ಮಾಡಲು ಅವಕಾಶವಿದೆ. ಆದರೆ, ಬಿಡುಗಡೆ ಇಚ್ಛಾಸಕ್ತಿ ಇಲ್ಲದಿರುವುದು ದುರ್ಧೈವ ಸಂಗತಿಯಾಗಿದೆ.
ಮಕ್ಕಳು, ಶಿಕ್ಷಕರಿಗೆ ಜೀವ ಭಯ:
ಕಿತ್ತು ಹೋದ ಚಾವಣಿ, ಮಳೆ ಬಂದರೆ ಸಾಕು ಸೋರುವ ಮಾಳಿಗೆ, ಯಾವಾಗ ಕಟ್ಟಡ ಕುಸಿಯಬಹುದೋ ಎಂಬ ಆತಂಕದಲ್ಲೇ ಮಕ್ಕಳು ವ್ಯಾಸಂಗ ಮಾಡುವ ಅನಿವಾರ್ಯ ಉಂಟಾಗಿದೆ. ಶಾಲೆಗೆ ಸುರಕ್ಷಿತ ಕಟ್ಟಡ ಇಲ್ಲ. ಪಾಲಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಪಡುವಂತಾಗಿದೆ. ಇದೇ ವ್ಯವಸ್ಥೆಯಲ್ಲೇ ಪಾಠಗಳು ನಡೆಯುತ್ತಿವೆ. ಎಲ್ಲಿ ಪಾಠ ಮಾಡುವಾಗ ಕಟ್ಟಡದ ಅವಶೇಷಗಳು ಕುಸಿಯುತ್ತವೆಯೋ ಎಂಬ ಆತಂಕ ಮಕ್ಕಳದು ಹಾಗೂ ಶಿಕ್ಷಕರದು.
ಸ್ಪಂದಿಸದ ಅಧಿಕಾರಿಗಳು:
ಕಟ್ಟಡದ ದುಃಸ್ಥಿತಿ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಂಡೂ ಕಾಣದಂತೆ ಜಾಣತನ ಪ್ರದರ್ಶಿಸುತ್ತಿದ್ದಾರೆ. ಶಾಲೆಯ ಮುಖ್ಯಗುರುಗಳು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸುವಂತೆ ಹಾಗೂ ಹೊಸ ಕೊಠಡಿಗಳಿಗಾಗಿ ಹಲವು ಬಾರಿ ಲಿಖಿತ ರೂಪದಲ್ಲಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಒಟ್ನಲ್ಲಿ ಸರ್ಕಾರಿ ಶಾಲೆಗಳು ಸುರಕ್ಷಿತವಲ್ಲದ ಕೊಠಡಿಗಳಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಿದ್ದು, ಈಗಲಾದರೂ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಕಾಳಜಿವಹಿಸಿ, ಹೊಸ ಕೊಠಡಿಗಳನ್ನು ಮಂಜೂರು ಮಾಡಿಸಿ, ಸುಸಜ್ಜಿತ ಕೊಠಡಿಗಳಲ್ಲಿ ಮಕ್ಕಳ ಕಲಿಕೆಗೆ ಅನುವು ಮಾಡಿಕೊಡುತ್ತಾ ಎಂಬುದನ್ನ ಕಾದು ನೋಡಬೇಕಾಗಿದೆ.
‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಾತ್ರ ಸೌಲಭ್ಯ ಕಲ್ಪಿಸುವುದಿಲ್ಲ. ಕಳಚಿ ಬೀಳುತ್ತಿರುವ ಕಟ್ಟಡದಲ್ಲಿ ಮಕ್ಕಳು ಹೇಗೆ ತಾನೇ ಶಿಕ್ಷಣ ಕಲಿಯಲು ಸಾಧ್ಯ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಭೀತಿಯುಂಟು ಮಾಡುವ ಶಾಲೆಗಳಿಗೆ ಹೇಗೆ ತಾನೇ ದಾಖಲಿಸುತ್ತಾರೆ. ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು‘.
- ಕೆ.ಎಸ್.ದೊಡ್ಡಬಸಪ್ಪ, ಸ್ಥಳೀಯ ನಿವಾಸಿ, ಸಣಾಪುರ.
ವರದಿ : ಜಿಲಾನಸಾಬ್ ಬಡಿಗೇರ್



















