ಬೆಂಗಳೂರು : ರಾಜ್ಯದಲ್ಲಿನ ಅನುಸೂಚಿತ ಜಾತಿ, ಅನುಸೂಚಿತ ಬುಡುಕಟ್ಟುಗಳ ಸಮುದಾಯದವರ ಮೇಲಾಗುವ ದೌರ್ಜನ್ಯ, ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆಯಂತಹ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಮೇಲ್ವಿಚಾರಣೆಗೆ ರಚಿಸಿರುವ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಗಳಿಗೆ ಆಯಾ ಜಿಲ್ಲಾ ಎಸ್ ಪಿ, ಆಯಾ ವಿಭಾಗದ ಡಿವೈಎಸ್ ಪಿ ಕಡ್ಡಾಯವಾಗಿ ಹಾಜರಾಗುವಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರರವರು ಆದೇಶ ಹೊರಡಿಸಿದ್ದಾರೆ,
ದಲಿತ ಸಮುದಾಯದವರ ಕುಂದುಕೊರತೆಗಳ ಹಾಗೂ ದೌರ್ಜನ್ಯ ತಡೆ ಕಾಯ್ದೆಯ ಪ್ರಕರಣಗಳ ಬಗ್ಗೆ ಮೇಲ್ವಿಚಾರಣೆ ಮತ್ತು ಜಾಗೃತಿ ಮೂಡಿಸುವ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಗೆ ಆಯಾ ಜಿಲ್ಲೆಯ ಪೊಲೀಸ್ ಅಧೀಕ್ಷಕರುಗಳು (ಎಸ್ ಪಿ) ಪದನಿಮಿತ್ತ ಸದಸ್ಯರುಗಳಾಗಿದ್ದು ಮತ್ತು ಆಯಾ ಜಿಲ್ಲೆಯ ಸಹಾಯಕ ಆಯುಕ್ತರ ಅಧ್ಯಕ್ಷತೆಯ ಉಪ ವಿಭಾಗ ಮಟ್ಟದ ಸಮಿತಿಗೆ ಆಯಾ ಉಪ ವಿಭಾಗದ ವ್ಯಾಪ್ತಿಗೊಳಪಡುವ ಉಪ ಪೊಲೀಸ್ ಅಧೀಕ್ಷಕರುಗಳು (ಡಿವೈಎಸ್ ಪಿ) ಪದನಿಮಿತ್ತ ಸದಸ್ಯರುಗಳಾಗಿದ್ದು ಸದರಿ ಜಾಗೃತಿ ಮತ್ತು ಮೇಲ್ವಿಚಾರಣೆ ಸಮಿತಿಯ ಸಭೆಯಲ್ಲಿ ದೌರ್ಜನ್ಯ ಪ್ರಕರಣಗಳ ಸ್ಥಿತಿಗತಿಗಳ ಬಗ್ಗೆ ಚರ್ಚಿಸಲು ಸಭೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳದೆ ಗೈರಾಗುತ್ತಿರುವುದು ಕಂಡು ಬಂದಿದ್ದರಿಂದ ಸಭೆಗಳಿಗೆ ಅಧಿಕಾರಿಗಳು ಕಡ್ಡಾಯ ಹಾಜರಾಗಲು ಸೂಕ್ತ ಆದೇಶ ಹೊರಡಿಸುವಂತೆ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ರಾಜ್ಯದ ಡಿಜಿ ಮತ್ತು ಐಜಿಪಿರವರಿಗೆ ಪತ್ರ ಬರೆದ ನಿಮಿತ್ಯ ಆದೇಶ ಹೊರಡಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















