
ಯಾದಗಿರಿ/ಗುರುಮಠಕಲ್: ನ. 06 ಗುರುವಾರ. ವಿಕಲಚೇತನ ಸ್ನೇಹಿ ಸಂಸ್ಥೆಯಾದ ಎಪಿಡಿ ಹಾಗೂ ಮನೋವೃಕ್ಷ ಆಲದಮರ ಸಂಸ್ಥೆ ಸಹಯೋಗದೊಂದಿಗೆ ಪಟ್ಟಣದಲ್ಲಿನ ಇಬ್ಬರು ಮಾನಸಿಕ ಅಸ್ವಸ್ಥರನ್ನು ಆರೈಕೆಗಾಗಿ ಯಾದಗಿರಿ ವೈಜ್ಞಾನಿಕ ಸಂಸ್ಥೆಗೆ ಸ್ಥಳಾಂತರಿಸಲಾಯಿತು.
ಕಳೆದ ಹಲವು ದಿನಗಳಿಂದ ಪಟ್ಟಣದೊಳಗೆ ಅಂದಾಜು 9 ರಿಂದ 10 ಜನ ಮಾನಸಿಕ ಅಸ್ವಸ್ಥರು ಇರುವುದು ಕಂಡುಬಂದಿದ್ದು, ಅವರಿಗೆ ಸ್ಥಳೀಯವಾಗಿ ಯಾವುದೇ ಸಂಬಂಧಿಕರು ಇಲ್ಲದಿರುವುದರಿಂದ ಎಪಿಡಿ ಸಂಸ್ಥೆಯು ಮನೋವೃಕ್ಷ ಆಲದಮರ ಫೌಂಡೇಶನ್ ಅವರನ್ನು ಸಂಪರ್ಕಿಸಿ ವಿಷಯವನ್ನು ತಿಳಿಸಿತ್ತು, ಅದರಂತೆ ಎಪಿಡಿ ಮತ್ತು ಆಲದಮರ ಸಂಸ್ಥೆಗಳು ಜೊತೆಗೂಡಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಅಸ್ವಸ್ಥರನ್ನು ಜಿಲ್ಲಾಸ್ಪತ್ರೆಯ ಮಾನಸಿಕ ಚಿಕತ್ಸ ವಿಭಾಗಕ್ಕೆ ಆರೈಕೆಗಾಗಿ ಯಾದಗಿರಿ ವೈಜ್ಞಾನಿಕ ಸಂಸ್ಥೆಗೆ ಸ್ಥಳಾಂತರಿಸಲಾಯಿತು.
ಮಾನಸಿಕ ಅಸ್ವಸ್ಥರಾದ ಹನುಮಂತ ಮತ್ತು ಸತ್ಯನಾರಾಯಣ ಎನ್ನಲಾದವರನ್ನು ಆಲದಮರ ಫೌಂಡೇಶನ್ ಮತ್ತು ಜಿಲ್ಲಾಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ ಹೆಚ್ಚುವರಿ ವೈದ್ಯಕೀಯ ಚಿಕಿತ್ಸೆ ನೀಡಿ, ಅವಶ್ಯಕ ಸಹಾಯ ನೀಡುವ ಮೂಲಕ ಮತ್ತೆ ಮುಖ್ಯ ವಾಹಿನಿಗೆ ತರುವ ಕಾರ್ಯ ಮಾಡಲಾಗುವುದು ಎಂದು ಆಲದಮರ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಶೇಖರ್ ಕಟ್ಟಿಮನಿ ತಿಳಿಸಿದರು.
ಇಂದಿನ ಕಾರ್ಯಾಚರಣೆಯಲ್ಲಿ ಎ ಪಿ ಡಿ ಸಂಸ್ಥೆಯ ತಾಲೂಕು ಸಂಯೋಜಕರಾದ ವಿರೂಪಾಕ್ಷ ಮಾಲಿಪಾಟೀಲ್, ವಿಕಲ ಚೇತನ ಸಹಾಯಕ ಗಂಗಪ್ಪ ಯಾದವ್, ಆರೋಗ್ಯ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್ ಸಜ್ಜನ್, 108 ಆಂಬುಲೆನ್ಸ್ ಸಿಬ್ಬಂದಿಯಾದ ಪವನ್ ಕುಮಾರ್ ಚಂದಾಪುರ್ ಹಾಗೂ ಶ್ರೀನಿವಾಸ್ ಇಎಂಟಿ ಸೇರಿದಂತೆ ಗುರುಮಠಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ



















