ಬೀದರ್: ಚುನಾವಣೆ ಬಂದಾಗ ಮಠಗಳು ಬೇಕು, ಮಠಗಳ ಭಕ್ತರು ಬೇಕು. ಆದರೆ ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡ ಸ್ವಾಮಿಗಳನ್ನು ತುಚ್ಛವಾಗಿ ಬೈದ ಸ್ವಾಮೀಜಿ ವಿರುದ್ಧ ರಾಜಕೀಯ ನಾಯಕರು(ಮಾನ್ಯ ಈ ನಾಡಿನ ಗೌರವಾನ್ವಿತ ಸಚಿವರಾದ ಶರಣ ಎಂ. ಬಿ. ಪಾಟೀಲರನ್ನು ಹೊರತುಪಡಿಸಿ ), ಬುದ್ದಿಜೀವಿಗಳು ಪ್ರತಿಭಟಿಸಲಿಲ್ಲ ಎಂದು ಸಾಹಿತಿ , ಪರಿಸರ ಸಂರಕ್ಷಕ,ಬಸವ ತತ್ವ ಅನುಯಾಯಿ ಸಂಗಮೇಶ ಎನ್. ಜವಾದಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗದುಗಿನ ತೋಂಟದ ಸಿದ್ಧರಾಮ ಶ್ರೀಗಳು,
ಸಾಣೇಹಳ್ಳಿ ಶ್ರೀಗಳು, ಭಾಲ್ಕಿ ಶ್ರೀಗಳು ಸೇರಿದಂತೆ ಇನ್ನಿತರ ಬಸವ ಪರ ಶ್ರೀಗಳನ್ನು
ಟೀಕಿಸುವ ಮೂಲಕ ಕೆಲವರು ದೊಡ್ಡವರಾಗಲು ಪ್ರಯತ್ನಿಸುತ್ತಾರೆ. ಹಾಗಾಗಲು ಸಾಧ್ಯವಿಲ್ಲ. ರಚನಾತ್ಮಕ ಟೀಕೆಗಳನ್ನು ಮಾಡಬಹುದು. ಆದರೆ ತಾವು ದೊಡ್ಡವರಾಗಲು ಬಸವ ತತ್ವ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿರುವ ಸ್ವಾಮಿಗಳನ್ನು ಹಾಗೂ ಸಾಧಕರನ್ನು ಟೀಕಿಸುವವರನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಪ್ರತಿನಿತ್ಯ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ
ದಿನಪತ್ರಿಕೆಗಳಲ್ಲಿ ಬಸವ ತತ್ವ ಪ್ರಚಾರಕರನ್ನು ಟೀಕಿಸಿ ಬರೆಯುತ್ತಿರುವ ಬರಹಗಳು ಪ್ರಕಟವಾಗುತ್ತಿವೆ. ಬಸವ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಿರುವ ಶ್ರೀಗಳ ಬಗ್ಗೆ ಇಡೀ ನಾಡಿನ ಜನತೆಗೆ ಗೊತ್ತಿದೆ.
ಇಲ್ಲಸಲ್ಲದ ಹಸಿ ಹಸಿ ಸುಳ್ಳುಗಳನ್ನು ಬರೆದರೆ, ಇಂದಿನ ನಾಗರಿಕ ಸಮಾಜ ಖಂಡಿತವಾಗಿಯೂ ಒಪ್ಪುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಒಪ್ಪುವ ಕೆಲಸ ಮಾಡಬೇಕು ಎಂದರು.
ವಚನ ಸಂವಿಧಾನದಲ್ಲಿರುವುದನ್ನು ಹೇಳಿದಾಗ ಅನೇಕರ ಹೊಟ್ಟೆಯಲ್ಲಿ ಮೆಣಸಿನಕಾಯಿ ಮುರಿದ ಹಾಗಾಗುತ್ತದೆ.ತತ್ವಗಳನ್ನು ಸರಿಯಾಗಿ ಗ್ರಹಿಸದೆ ಟೀಕಿಸುವವರು ಇದ್ದಾರೆ. ಇಂಥ ಸ್ವಾರ್ಥಿಗಳ ಬಗ್ಗೆ ಸಮಾಜ ಸದಾ ಜಾಗೃತವಾಗಿರಬೇಕು ಎಂದರು.
ಬಸವಾದಿ ಶರಣರ ಮಾನವೀಯ ಮೌಲ್ಯಗಳು ಹಾಗೂ ಸಮಾನತೆ, ಸೌಹಾರ್ದತೆಯ ತತ್ವಗಳ ನಂಬಿಕೆಗಳೇ ಮೇಲೆ ಇಡೀ ಬಸವ ತತ್ವ ಅನುಯಾಯಿಗಳ ಸಮೂಹ ಸಾಗುತ್ತಿದೆ. ಹೀಗಿರುವಾಗ ಕೇವಲ ಅವರವರ ವೈಯಕ್ತಿಕ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಟೀಕಿಸಿ, ದೊಡ್ಡವರಾಗಲು ಪ್ರಯತ್ನ ಮಾಡುತ್ತಿದ್ದಾರೆ. ಮಾಡಲಿ ಸಂತೋಷ ಅವರಿಗೆ ಸತ್ಯ ದರ್ಶನವಾಗಲಿ ಎಂದು ಬಸವಾದಿ ಶರಣರಲ್ಲಿ ಪ್ರಾರ್ಥಿಸುತ್ತೇನೆ,
ಸಮಾಜದ ಹಾಗೂ ನಾಡಿನ ಅಭಿವೃದ್ಧಿಗಾಗಿ ಅವರೆಲ್ಲರೂ ಯೋಚಿಸಲಿ ಎಂದು ಸಂಗಮೇಶ ಎನ್. ಜವಾದಿ ನುಡಿದರು.
- ಕರುನಾಡ ಕಂದ ಪತ್ರಿಕೆ



















