ಯಾದಗಿರಿ /ಗುರುಮಠಕಲ್ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ಕಾಲೇಜಿನ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಆಹಾರ ಸೇವಿಸಿದ ನಂತರ ಸುಮಾರು 30 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಪ್ರಕರಣ ಬೆಳಕಿಗೆ ಬಂದಿದೆ.
ಅಸ್ವಸ್ಥರಾದ ವಿದ್ಯಾರ್ಥಿನಿಯರಿಗೆ ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅವರ ಆರೈಕೆಯಲ್ಲಿ ನಿರತರಾಗಿದ್ದಾರೆ. ಇವರಲ್ಲಿ ಮೂವರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗೆ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಯ ನಂತರ, ವಸತಿ ನಿಲಯದ ನಿರ್ವಹಣೆಯಲ್ಲಿ ಗಂಭೀರ ನಿರ್ಲಕ್ಷ್ಯ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಯುವ ಸೇನೆ, ಮುಧೋಳ ಅಧ್ಯಕ್ಷರಾದ ನರೇಶ್ ಎ. ನಾಟೀಕಾರ್ ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















