
ಎಳ್ಳು ಅಮಾವಾಸ್ಯೆ ಅಂಗವಾಗಿ ಇಲ್ಲಿಯ ರೈತರು ಭೂತಾಯಿಗೆ ಪೊಜಿ ಸಲ್ಲಿಸಿ ನೈವೇದ್ಯ ಅರ್ಪಿಸಿ ಸಂಭ್ರಮದಿಂದ ಚರಗ ಚಲಿದರು.
ಉತ್ತರ ಕರ್ನಾಟಕದ ಅದರಲ್ಲೂ ಗದಗ ಜಿಲ್ಲಾ ಗದಗ ತಾಲೂಕಿನ ತಿಮ್ಮಾಪೂರ ಹರ್ಲಾಪೂರ, ಲಕ್ಕುಂಡಿ, ಹಾತಲಗೇರಿ ಗ್ರಾಮದ ರೈತರು ಹಿಂಗಾರು ಹಂಗಾಮಿನಲ್ಲಿ ಬೆಳೆದಿರುವ ಕಡಲೆ ಗೋಧಿ ಜೋಳದ ಬೆಳೆಗಳಿಗೆ ಪೂಜೆ ಸಲ್ಲಿಸಿದರು.
ರೈತರು ಕುಟುಂಬ ಪರಿವಾರ ಸಮೇತರಾಗಿ ಜಮೀನಿನ ಬೆಳೆಯ ಮಧ್ಯೆ ಇರುವ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.
ಐದು ಕಲ್ಲುಗಳನ್ನು ಇಟ್ಟು ಅವುಗಳನ್ನೂ ಪಾಂಡವರು ಹಾಗೂ ಇನ್ನೊಂದು ಕಲ್ಲನ್ನು ಕಳ್ಳನೆಂದು ಭಾವಿಸಿ ಪೂಜ್ಯ ಸಲ್ಲಿಸಿ ದೇವರಿಗೆ ಉಡಿ ತುಂಬಿ ನೈವೇದ್ಯವನ್ನು ಬೆಳೆಯಲ್ಲಿ ಎರಚುತ್ತಾ ಹುಲ್ಲಿಲೋಗೂ ಚಲಮುರಿಗೊ ಎಂದು ಭೂ ತಾಯಿಗೆ ಉಣಬಡಿಸಿದರು.
ನಂತರ ಬಂಧು ಬಾಂಧವರೆಲ್ಲರು ಸೇರಿ ಜೋಳದ ರೊಟ್ಟಿ ಸಜ್ಜಿ ರೊಟ್ಟಿ ಬದನೆಕಾಯಿ ಪಲ್ಯ ವಿವಿಧ ಕಾಳು ಪಲ್ಯ ಕರಿಗಡಬು, ಶೇಂಗಾ ಹೋಳಿಗೆ ಎಳ್ಳು ಹೋಳಿಗೆ ತುಪ್ಪ ಕರಿದ ಮೇಣಸಿನಕಾಯಿ, ಸೆಂಡಿಗಿ ಉಪ್ಪಿನಕಾಯಿ ಸೇರಿದಂತೆ ವಿವಿಧ ಖಾದ್ಯಗಳ ಸಹ ಭೋಜನ ಸವಿದರು.
ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ತಮ್ಮ ಜಮೀನಿನಲ್ಲಿ ಕುಟುಂಬ ಸಮೇತರಾಗಿ ಭೂರಮಗೆ ಬಾಗಿನ ಅರ್ಪಿಸಿ ರಾಜ್ಯದಲ್ಲಿ ರೈತ ಬೆಳೆದ ಎಲ್ಲಾ ಬೆಳೆಗಳು ಹುಲುಸಾಗಿ ಬೆಳೆದು ಉತ್ತಮ ಇಳುವರಿ ಬರಲಿ ಎಂದು ಪ್ರಾರ್ಥಿಸಿದರು.
- ಕರುನಾಡ ಕಂದ ಪತ್ರಿಕೆ.




















