ಯಾದಗಿರಿ/ ಗುರುಮಠಕಲ್ : ಕೋಲಿ, ಕಬ್ಬಲಿಗ, ಅಂಬಿಗ ಸೇರಿದಂತೆ ಪರ್ಯಾಯ ಜನಾಂಗಗಳನ್ನು ಪರಿಶಿಷ್ಟ ಪಂಗಡ (ಎಸ್.ಟಿ) ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಂದಿರಿಸಿ, ಡಿಸೆಂಬರ್ 29ರಂದು ಕಲಬುರಗಿ ನಗರದಲ್ಲಿ ಕೋಲಿ ಸಮಾಜದ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕೋಲಿ ಸಮಾಜದ ಮುಖಂಡ ಶಿವಕುಮಾರ ನಾಟೆಕರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ಹಲವು ದಶಕಗಳಿಂದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತರ್ ಹಾಗೂ ಬಾರಿಕೆರ ಜನಾಂಗಗಳು ಎಸ್‌ಟಿ ವರ್ಗಕ್ಕೆ ಸೇರ್ಪಡೆಯಾಗಬೇಕೆಂದು ಆಗ್ರಹಿಸಿದರು.
ಕೆಲ ರಾಜ್ಯಗಳಲ್ಲಿ ನಮ್ಮ ಸಮುದಾಯ ಎಸ್‌ಸಿ ಪಟ್ಟಿಯಲ್ಲಿದ್ದರೆ, ಕೆಲವೆಡೆ ಎಸ್‌ಟಿ ವರ್ಗದಲ್ಲಿದೆ. ಆದರೆ ಕರ್ನಾಟಕದಲ್ಲಿ ನಮ್ಮ ಸಮುದಾಯಗಳು ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿವೆ,” ಎಂದು ವಿವರಿಸಿದರು.
ಕೋಲಿ ಸಮಾಜದ ಮುಖಂಡರಾದ ಶರಣಪ್ಪ ತಳವಾರ ಮಾತಾನಾಡಿ “ದಿವಂಗತ ವಿಠಲ ಹೆರೂರ ಕಳೆದ ಮೂರು ದಶಕಗಳಿಂದ ಹೋರಾಟ ನಡೆಸಿದರೂ ಸರ್ಕಾರದಿಂದ ನ್ಯಾಯ ದೊರೆತಿಲ್ಲ. ಕಳೆದ ಎರಡು ವರ್ಷದಿಂದ ರಾಜ್ಯ ಸರಕಾರದ ಹೊಸ ಪ್ರಸ್ತಾವನೆ ಕೇಂದ್ರ ಸರಕಾರದ ಮುಂದೆ ತರಲು ವಿಳಂಬದ ದೊರಣೆ ತೋರುತ್ತಿರುವುದು ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ.
ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಬಾರಿಕೆರ ಸೇರಿದಂತೆ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಹಳೆಯ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ವಾಪಸು ಕಳಿಸುತ್ತಿರುವುದರಿಂದ, ಹೊಸದಾಗಿ “ಟೊಕರೆ ಕೋಲಿ” ಮತ್ತು ಅದರ ಉಪಪದಗಳ ಕುರಿತ ನಿಖರ ಅಧ್ಯಯನದ ಆಧಾರದ ಮೇಲೆ ರಾಜ್ಯ ಸರ್ಕಾರ ಹೊಸ ಪ್ರಸ್ತಾವನೆ ಸಿದ್ಧಪಡಿಸಬೇಕು ಎಂದು ಹೇಳಿಕೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶೋಭ ಬಾಣಿ, ಶ್ರೀಮತಿ ಅಮೃತ ತಿಪ್ಪಶೆಟ್ಟಿ, ಕೃಷ್ಣಪ್ಪ, ಶಿವ ಶರಣಪ್ಪ ಜಮಾದಾರ, ಸುರೇಶ್ ಹೂಗಿ, ಮಲ್ಲಿಕಾರ್ಜುನ, ಶಂಕರ ಕಂದಕೂರ, ಶ್ರೀನಿವಾಸ ಗಾಳ, ಚನ್ನಬಸ್ಸಪ್ಪ ಗಾಜರಕೊಟ್, ಶರಣಪ್ಪ ಕೋಟಗೇರಾ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















