ಬನಹಟ್ಟಿ: ಯಾದಗಿರಿಯಲ್ಲಿ ನಡೆಯುವ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಐದನೇ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ನೀಡಲಾಗುವ ರಾಜ್ಯ ಮಟ್ಟದ ‘ಎಚ್. ನರಸಿಂಹಯ್ಯ ‘ ಪ್ರಶಸ್ತಿಗೆ ಇಳಕಲ್ ತಾಲೂಕಿನ ಸಿದ್ದನಕೊಳ ದಾಸೋಹ ಕಲಾ ಪೋಷಕ ಮಠದ ಧರ್ಮದರ್ಶಿಗಳಾದ ಶ್ರೀ ಡಾ. ಶಿವಕುಮಾರ್ ಸ್ವಾಮೀಜಿಯವರು ಆಯ್ಕೆಯಾಗಿರುತ್ತಾರೆ.
ಅದೇ ರೀತಿ ರಾಜ್ಯಮಟ್ಟದ ‘ಚೈತನ್ಯಶ್ರೀ’ ಪ್ರಶಸ್ತಿಗೆ ಇಲಕಲ್ ಡಯಟ್ ನ ನಿವೃತ್ತ ಉಪನ್ಯಾಸಕಿ, ಸಾಹಿತಿಗಳಾದ ಶ್ರೀಮತಿ ಲಲಿತಾ ಕೆ. ಹೊಸಪ್ಯಾಟೆ ಅವರು ಆಯ್ಕೆ ಆಗಿರುತ್ತಾರೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಚಿರಂಜೀವಿ ರೋಡಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ರಾಜಮಾನೆ ಪತ್ರಿಕೆಗೆ ತಿಳಿಸಿರುತ್ತಾರೆ.
ಯಾದಗಿರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸೆಂಬರ್ 28, 29, 30ರಂದು ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು, ಸಚಿವರುಗಳು, ಶಾಸಕರುಗಳು, ಮಾಜಿ ಶಾಸಕರುಗಳು, ಮಾಜಿ ಸಚಿವರುಗಳು, ವಿಜ್ಞಾನಿಗಳು ನಿವೃತ್ತ ನ್ಯಾಯಾಧೀಶರುಗಳು, ಪ್ರಗತಿಪರ ಸಾಹಿತಿಗಳು ಶರಣ ತತ್ವ ಚಿಂತಕರು ಭಾಗಿಯಾಗಲಿದ್ದಾರೆ.
ನಾಡಿನದ್ಯಂತ ವೈಜ್ಞಾನಿಕ ವಿಚಾರವುಳ್ಳ ಪ್ರತಿನಿಧಿಗಳು ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಶ್ರೀ ವಿಶ್ವಾರಾಧ್ಯ ಸತ್ಯಂಪೇಟೆ ಅವರ ಮೆರವಣಿಗೆ, ಉಪನ್ಯಾಸ, ಗೋಷ್ಠಿಗಳು, ವಿಜ್ಞಾನಕ್ಕೆ ಸಂಬಂಧಪಟ್ಟ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಇರಲಿದೆ ಎಂದು ತಿಳಿಸಿರುವರು.
- ಕರುನಾಡ ಕಂದ ಪತ್ರಿಕೆ.




















