ವಿಜಯನಗರ / ಕೊಟ್ಟೂರು : ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಭಯವನ್ನು ದೂರ ಮಾಡಲು ಪಟ್ಟಣ ಪಂಚಾಯಿತಿಯು ಎಬಿಸಿ (ABC) ನಿಯಮಾವಳಿ 2023ರ ಮಾರ್ಗಸೂಚಿಯಂತೆ ಸಮಗ್ರ ಕ್ರಮಗಳನ್ನು ಜಾರಿಗೆ ತಂದಿದೆ.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಎ. ನಸರುಲ್ಲಾ ಅವರು ಈ ಕುರಿತು ಮಾಹಿತಿ ನೀಡಿ, ಪಟ್ಟಣದ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಬೀದಿ ನಾಯಿಗಳಿಗಾಗಿ ವಿಶೇಷ ಘಟಕ ಮತ್ತು ಆಶ್ರಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಸಂಖ್ಯೆಯನ್ನು ಅಂದಾಜಿಸಲಾಗಿದ್ದು, ಪಟ್ಟಣದಲ್ಲಿ ಸುಮಾರು 625 ನಾಯಿಗಳಿವೆ ಎಂದು ಗುರುತಿಸಲಾಗಿದೆ. ಇವುಗಳ ನಿಯಂತ್ರಣಕ್ಕಾಗಿ ಪಶು ಇಲಾಖೆಯ ಸಹಯೋಗದೊಂದಿಗೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ನಾಗರಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯದ ರಕ್ಷಣೆ ಸಮಾಜದ ಪ್ರಮುಖ ಆದ್ಯತೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಮತ್ತು ರೇಬಿಸ್ನಂತಹ ಪ್ರಾಣಿಜನ್ಯ ರೋಗಗಳ ಅಪಾಯವನ್ನು ತಡೆಗಟ್ಟುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೊಟ್ಟೂರು ಪಟ್ಟಣ ಪಂಚಾಯಿತಿಯು ವೈಜ್ಞಾನಿಕ ಕ್ರಮಗಳ ಮೂಲಕ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಮತ್ತು ಶಿಸ್ತುಬದ್ಧ ಆಶ್ರಯ ವ್ಯವಸ್ಥೆ ಕಲ್ಪಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ವರದಿ : ಜಿಲಾನಸಾಬ್ ಬಡಿಗೇರ್




















