
ಸೇಡಂ/ಯಾನಾಗುಂದಿ: ಡಿ.24 . ಮಾತಾ ಮಾಣಿಕೇಶ್ವರಿ ಅಮ್ಮನವರ ಆಶ್ರಮಕ್ಕೆ ಸಂಬಂಧಿಸಿದ ಟ್ರಸ್ಟ್ ಕುರಿತಾದ ಸುದ್ದಿ ಪ್ರಕಟವಾದ ಹಿನ್ನಲೆಯಲ್ಲಿ ಬುಧವಾರ ಯಾನಗುಂದಿ ಆಶ್ರಮದ ಆವರಣದಲ್ಲಿ ದಾಖಲೆಗಳೊಂದಿಗೆ ಟ್ರಸ್ಟ್ ಅಧ್ಯಕ್ಷ ಶಿವಯ್ಯ ಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.
ಆಶ್ರಮದ ಟ್ರಸ್ಟ್‌ನಲ್ಲಿ ಕಾರ್ಯದರ್ಶಿಯಾಗಿ ತಮ್ಮ ಪುತ್ರ ಸುಮನ್ ಅವರನ್ನು ಸೇರ್ಪಡೆ ಮಾಡಿರುವ ವಿಚಾರವಾಗಿ ಕೆಲ ವ್ಯಕ್ತಿಗಳ ವಿರೋಧ ಹಿನ್ನಲೆಯಲ್ಲಿ ಆತನನ್ನು ಟ್ರಸ್ಟ್‌ನಿಂದ ಕೈಬಿಟ್ಟು ಶೀಘ್ರ ಪುನರ್ ರಚನೆ ಮಾಡುತ್ತೇವೆ ಎಂದು ಹೇಳಿದರು.
ವಯಸ್ಸಾದ ಕಾರಣ ಸಹಾಯಕ್ಕೆಂದು ನನ್ನ ಪುತ್ರ ಸುಮನ್‌ರನ್ನು ನನ್ನೊಡನೆ ಇರಿಸಿಕೊಂಡಿರುವೆ. ನನಗಷ್ಟೇ ಸಹಾಯಕ, ಟ್ರಸ್ಟ್‌ನಿಂದ ತೆಗೆಯುತ್ತೇವೆ. ಮಾಣಿಕೇಶ್ವರಿ ಅಮ್ಮನವರ ಅಧ್ಯಕ್ಷತೆಯಲ್ಲಿ, ನಾನು ಕಾರ್ಯದರ್ಶಿಯಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಆಗಿನ ಮುಖ್ಯಮಂತ್ರಿ ಬಿ.ಡಿ.ಜತ್ತಿಯವರ ಅವಧಿಯಲ್ಲಿ 55.04 ಎಕರೆ ಭೂಮಿಯನ್ನು ಎಕರೆಗೆ ರೂ.20ರ ಬೆಲೆಗೆ ದೇವಸ್ಥಾನ, ಆಶ್ರಮ, ವೇದಪಾಠ ಶಾಲೆ ನಿರ್ಮಾಣಕ್ಕೆಂದು ನಮ್ಮ ಆಶ್ರಮಕ್ಕೆ ಪರಾಬಾರೆ ಮಾಡಿದೆ ಎಂದರು.
ಯಾನಗುಂದಿ ಆಶ್ರಮದ ಭಕ್ತರಾದ ನೆರೆಯ ನಾರಾಯಣಪೇಟ್‌ದ ಬನ್ನಪ್ಪ ಅವರ ಪ್ರಯತ್ನ ಮತ್ತು ತಾಂಡೂರಿನ ಮಾಣೆಪ್ಪ ಅವರ ಧನಸಹಾಯದಿಂದ ಈ ಜಮೀನನ್ನು ಪಡೆದದ್ದು. ಯಾನಾಗುಂದಿ ಗ್ರಾಮದ ಸ್ಥಳೀಯರಿಂದ ಭೂಮಿ ದಾನ ಪಡೆದಿಲ್ಲ ಅವರಿಂದ ನಮಗೆ ಯಾವುದೇ ತಕರಾರು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗುರುಮಠಕಲ್ ಖಾಸಮಠ ಹಾಗೂ ಯಾನಗುಂದಿ ಕ್ಷೇತ್ರಕ್ಕೂ ಒಳ್ಳೆಯ ಒಡನಾಟ ಇದೆ, ಗುರುಮಠಕಲ್ ಶ್ರೀಗಳಿಗೆ ತಿಂಗಳಿಗೆ ಒಮ್ಮೆಯಾದರೂ ಯಾನಗುಂದಿ ಭೇಟಿ ನೀಡಲು ಹಲವು ಬಾರಿ ಹೇಳಿದರು ಅವರು ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದರು.
ಮೋತಕಪಲ್ಲಿ ಜಾತ್ರೆ ಸೇರಿದಂತೆ ಜಾತ್ರೆಗಳ ಕುರಿತು ಈ ಹಿಂದೆ ಶಿವಯ್ಯ ಸ್ವಾಮಿ ನೀಡಿದ್ದ ಹೇಳಿಕೆಯಿಂದ ಜನರ ಭಕ್ತಿ ಮತ್ತು ನಂಬಿಕೆಗೆ ನೋವಾಗಿದ್ದು, ನಾನು ಕ್ಷಮೆಯಾಚಿಸುವೆ. ಜಾತ್ರೆಗಳಲ್ಲಿ ಅಹಿಂಸೆ, ಪ್ರಾಣಿಬಲಿ ಮತ್ತು ಮದ್ಯ ಸೇವನೆ ನಿಷೇಧದ ಕುರಿತು ಪ್ರಚಾರ ಮಾಡಬೇಕು, ಧರ್ಮ ಪ್ರಚಾರ ಆಗಬೇಕು ಎನ್ನುವ ಭಾವದಲ್ಲಿ ನಾನು ಮಾತನಾಡಿದ್ದೆ ಅಷ್ಟೆ ಎಂದು ಸ್ಪಷ್ಟನೆ ನೀಡಿದರು.
ನಮ್ಮ ರಾಜ್ಯದ ಹಾಗೂ ನೆರೆ ತೆಲಂಗಾಣ ರಾಜ್ಯದ ಭಕ್ತರ ನಡುವೆ ತಾರತಮ್ಯವಿಲ್ಲ ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಇಲ್ಲದೆ ಎಲ್ಲಾ ಭಕ್ತರಿಗೂ ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಟ್ರಸ್ಟ್‌ನಲ್ಲಿ ಸ್ಥಳೀಯರಿಗೂ ಸದಸ್ಯತ್ವ ನೀಡುತ್ತೇವೆ. ಕೆಲವೊಮ್ಮೆ ಆಶ್ರಮದ ಸಿಬ್ಬಂದಿಯಿಂದ ಸಮಸ್ಯೆಯಾಗಿವೆ. ಅವೆಲ್ಲವೂ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಟ್ರಸ್ಟ್ ಕಾರ್ಯದರ್ಶಿ ಸುಮನ್, ಸದಸ್ಯರಾದ ಸಿದ್ರಾಮಪ್ಪ ಸಣ್ಣೂರ, ಹಣಮಂತು ಮಡ್ಡಿ, ಕಿಷ್ಟಪ್ಪ ಪುರುಷೋತ್ತಮ, ನಾಗವೇಣಿ ವಸ್ತ‍್ರದ್, ಭಕ್ತರಾದ ಅನಂತಪ್ಪ ಯದ್ಲಾಪುರ, ತಿಪ್ಪಣ್ಣ, ನರಸಿಂಹಲು ನಿರೇಟಿ, ನಾರಾಯಣ ದಂತಾಪುರ, ಸಾಯಲು ನಿರೇಟಿ, ಬ್ರಹ್ಮನಂದರೆಡ್ಡಿ ಕೇಶ್ವಾರ, ಬಸಣ್ಣ ಅರೆಬಿಂಜರ, ಶಶಿಕಲಾ ಉಪಸ್ಥಿತರಿದ್ದರು.
ವರದಿ : ಜಗದೀಶ್ ಕುಮಾರ್ ಭೂಮಾ




















