ಬಳ್ಳಾರಿ / ಕಂಪ್ಲಿ: ಮುಂದಿನ ದಿನದಲ್ಲಿ ಚರ್ಚ್ ಗಳಿಗೆ ಅನುದಾನದ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.
ಪಟ್ಟಣದ ಸೋಮಪ್ಪ ದೇವಸ್ಥಾನ ಬಳಿಯಲ್ಲಿರುವ ಎಲ್-ಷಡ್ಡಾಯ್ ಚರ್ಚ್ ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಕೇಕ್ ಕತ್ತರಿಸಿದ ನಂತರ ಮಾತನಾಡಿ, ಸಂತೋಷ ಮತ್ತು ಶಾಂತಿ ಸಮಾಧಾನದ ಶ್ರೇಷ್ಠ ಹಬ್ಬವಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಕಲಿಸುವ ನಿಟ್ಟಿನಲ್ಲಿ ಮುಂದಾಗಬೇಕು. ಇಲ್ಲಿನ ಎಲ್-ಷಡ್ಡಾಯ್ ಚರ್ಚ್ ನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದು, ಇಲ್ಲಿನ ಸೋಮಪ್ಪ ದೇವಸ್ಥಾನದಿಂದ ಚರ್ಚ್ ವರೆಗಿನ ರಸ್ತೆಯನ್ನು ಮುಂದಿನ ದಿನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಚರ್ಚ್ ಸಭಾಪಾಲಕ ಪಾಸ್ಟರ್ ಪಾಲ್ ಪಂಪಾಪತಿ ಮಾತನಾಡಿ, ಮನುಷ್ಯ ಮನುಷ್ಯನನ್ನು ಪ್ರೀತಿಸುವಾಗ ಮನಸ್ಸಿನಲ್ಲಿ ದೇವರು ಜನಿಸುತ್ತಾನೆ. ಮಕ್ಕಳಿಗಾಗಿ ತಂದೆ–ತಾಯಿ ತ್ಯಾಗ ಮಾಡುತ್ತಾರೆ. ಮಕ್ಕಳು ವೃದ್ಧಾಪ್ಯದಲ್ಲಿ ತಂದೆ–ತಾಯಿಯರನ್ನು ಸಲಹಬೇಕು. ಬಡವರ, ಹಸಿದವರ ರೋಗಿಗಳ ಸೇವೆ ಮಾಡಬೇಕು. ಪ್ರತಿಯೊಬ್ಬರೂ ಸ್ವಾರ್ಥತೆ, ಅಹಂಕಾರ, ದರ್ಪ ಬಿಟ್ಟು ಜೀವನ ನಡೆಸಬೇಕು. ಆರೋಗ್ಯ, ಸಂಪತ್ತು, ಜ್ಞಾನವನ್ನು ಇತರರ ಒಳಿತಾಗಿ ವಿನಿಯೋಗಿಸಿದಾಗ ದೇವರು ನಮ್ಮಲ್ಲೂ ಜನಿಸುವನು ಎಂಬುದು ಕ್ರಿಸ್ತನ ಸಂದೇಶವಾಗಿದೆ. ಏಸು ಕ್ರಿಸ್ತರ ಸಂದೇಶವನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಿ ಎಲ್ಲರೂ ನೆಮ್ಮದಿಯಿಂದ ಬದುಕಬಹುದು ಎಂದರು. ಕ್ರಿಸ್ ಮಸ್ ಅಂಗವಾಗಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಸಮವಸ್ತ್ರ ಹಾಗೂ ಪುಸಕ್ತಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯ ಸಿ.ಆರ್.ಹನುಮಂತ, ಪುರಸಭೆ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಲ್ಲೇಶಪ್ಪ, ಮುಖಂಡರಾದ ಕೆ.ಷಣ್ಮುಕಪ್ಪ, ಮೆಹಬೂಬ್, ಶಶಿಕುಮಾರ, ಸಿ.ವಿರುಪಾಕ್ಷಿ, ಸೋಮಪ್ಪ, ಮೌಲಪ್ಪ, ಹುಲುಗಪ್ಪ, ಗಣೇಶ, ಮಾರೆಪ್ಪ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















