ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ನಗರದ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದ ಜೊತೆಗೆ ವಿಧ್ಯಾರ್ಥಿಗಳ ಪ್ರಗತಿಯ ಕುರಿತು ಪಾಲಕರ ಸಭೆ ಜರುಗಿತು.
ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ದೇವಿಂದ್ರಪ್ಪ ಎಸ್ ಕರಡಕಲ್ ಮಾತನಾಡಿ ಮಗುವಿಗೆ ತಾಯಿಯೇ ಮೊದಲ ಪಾಠಶಾಲೆ, ತಾಯಿಯಾದವರು ಮಗುವಿಗೆ ಒಳ್ಳೆಯ ಸಂಸ್ಕಾರ, ಆಚಾರ ವಿಚಾರಗಳನ್ನು ಧಾರ್ಮಿಕ ಮೌಲ್ಯಗಳನ್ನು ಸಮಾಜದಲ್ಲಿ ಸರ್ವತ ಅಭಿಮುಖವಾಗಿ ಬೆಳೆಸುವುದು ತಾಯಿಯ ಪ್ರಥಮ ಪಾತ್ರ, ತದನಂತರ ತಂದೆಯು ಪಾತ್ರವು ಅಷ್ಟೇ ಪ್ರಮುಖ ಮಕ್ಕಳನ್ನು ಶಾಲೆಗೆ ಕೊಂಡೊಯ್ದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯಂತ ಶ್ರೇಷ್ಠ ಕಾಯಕ. ನಂತರ ಶಿಕ್ಷಕರು ಶಿಕ್ಷಣ ಜೊತೆಗೆ ಒಳ್ಳೆಯ ಆದರ್ಶ, ಧಾರ್ಮಿಕ, ಸಾಂಸ್ಕೃತಿಕ ಓದು – ಬರಹ ಅಭ್ಯಾಸದ ಜೊತೆಗೆ ಮಕ್ಕಳಲ್ಲಿ ವಿದ್ಯೆಯೊಂದಿಗೆ ಉತ್ತಮ ಬಾಂಧವ್ಯ ಬೆಸೆಯುವುದರ ಮೂಲಕ ಒಳ್ಳೆಯ ಆದರ್ಶ ವಿದ್ಯಾರ್ಥಿಯಾಗಿ ಮಾಡಿದಾಗ ಮಾತ್ರ ಮಗು ಯಶಸ್ಸು ಕಾಣಲು ಸಾಧ್ಯ. ಹಾಗಾಗಿ ಈ ಮೂರು ಅತ್ಯಂತ ಶ್ರೇಷ್ಠವಾಗಿರುವಂಥವು ಈ ಮೂರು ಒಂದಾದಾಗ ಮಾತ್ರ ಮಕ್ಕಳು ಶಿಕ್ಷಣದಲ್ಲಿ ಉನ್ನತವಾಗಿ ಬೆಳೆಯಲು ಸಾಧ್ಯ ಎಂದರು.
ಪ್ರಾಂಶುಪಾಲರಾದ ಅಪ್ಪು ರಾಥೋಡ್ ಅಧ್ಯಕ್ಷತೆ ವಹಿಸಿದ್ದರು.
ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಹಾಗೂ ಸರಸ್ವತಿ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪ್ರಸ್ತುತ ಶಾಲೆಯಲ್ಲಿ ಸಮಯ ಪಾಲನೆ, ಮೂಲಭೂತ ಸೌಕರ್ಯ ಜೊತೆಗೆ ಸರಿಯಾಗಿ ತರಗತಿಗಳು ನಡೆಯದಿರುವ ಬಗ್ಗೆ ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಪ್ರಾಂಶುಪಾಲರು ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳನ್ನು ಒಂದೊಂದಾಗಿ ಬಗೆಹರಿಸುವುದಾಗಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಗೂ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಲ್ಲಾ ಶಿಕ್ಷಕರು,ನಿಲಯ ಪಾಲಕರಾದ ಬಿಬಿ ಬಿರಾದಾರ ರಮೇಶ ಯಾಳಗಿ ಮುದನೂರ , ಮಲ್ಲನಗೌಡ ಪೋಲಿಸ್ ಪಾಟೀಲ ಕಿರದಳ್ಳಿ ಅತಿಥಿಗಳು ಸೇರಿದಂತೆ ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಶಿಕ್ಷಕರಾದ ವಿಜಯಕುಮಾರ ರಡ್ಡಿ ಯಾಳಗಿ ನಿರೂಪಿಸಿದರು, ಮೌನೇಶ ಬಡಿಗೇರ ಸ್ವಾಗತಿಸಿ, ಇಸ್ಮಾಯಿಲ್ ಮಕಾಂದಾರ ವಂದಿಸಿದರು.
- ಕರುನಾಡ ಕಂದ ಪತ್ರಿಕೆ.




















