ದಾವಣಗೆರೆ: ಫೆಬ್ರವರಿ 14 ,15 ರಂದು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕು ಸೂರಗೊಂಡನ ಕೊಪ್ಪ (ಭಾಯಾಗಡ್) ನಲ್ಲಿ ನಡೆಯುವ ಬಂಜಾರ ಸಮಾಜದ ಕುಲಗುರು ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತೋತ್ಸವದ ಅಂಗವಾಗಿ ನಾಡಿದ್ದು ದಿನಾಂಕ 09/01/2026 ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ವಿಧಾನ ಸೌಧದ ಸಮಿತಿ ಕೊಠಡಿ ಸಂಖ್ಯೆ 313 ರಲ್ಲಿ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ. ಮಹದೇವಪ್ಪ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಜಯಂತಿಯ ಪೂರ್ವಭಾವಿ ಸಭೆಗೆ ನಮ್ಮ ಬಂಜಾರ ಸಮಾಜದ ಜನಪ್ರತಿನಿಧಿಗಳು, ಮಾಜಿ ಪ್ರತಿನಿಧಿಗಳು, ವಿವಿಧ ಸಂಘ, ಸಂಸ್ಥೆ, ಸಂಘನೆಗಳ ಪದಾಧಿಕಾರಿಗಳು, ಭಾಗವಹಿಸದೆ ಆ ಸಭೆಯನ್ನು ಬಹಿಷ್ಕರಿಸಬೇಕೆಂದು ರಾಷ್ಟ್ರೀಯ ಗೋರ್ (ಬಂಜಾರ)ಮಳಾವ್ – ಕರ್ನಾಟಕ (ರಿ.) ಸಂಘಟನೆ ರಾಜ್ಯಾಧ್ಯಕ್ಷ ಡಿ. ತುಳಸಿ ನಾಯ್ಕ ರವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟನ ಮಾನದಂಡಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕ ಒಳ ಮೀಸಲಾತಿ ಜಾರಿಗೊಳಿಸಿ ಬಂಜಾರ, ಭೋವಿ, ಕೊರಚ,ಕೊರಮ ಮತ್ತು ಬುಡಕಟ್ಟು ಅಲೆಮಾರಿ ಸಮುದಾಯಗಳನ್ನು ಮೀಸಲಾತಿಯಿಂದ ಹೊರ ದಬ್ಬುವ ಕೆಲಸ ಮಾಡಿದೆ.
ಈ ಒಳಮೀಸಲಾತಿ ವರ್ಗೀಕರಣ ಸಂದರ್ಭದಲ್ಲಿ ಕನಿಷ್ಠ ಪಕ್ಷ ನಮ್ಮ ಸಮುದಾಯದ ಜನ ಪ್ರತಿನಿಧಿಗಳು, ಪ್ರಮುಖರು ಹಾಗೂ ಸಂಘಟನೆಗಳ ಜೊತೆ ಚರ್ಚಿಸದೇ, ನಮ್ಮ ಅಹವಾಲುಗಳನ್ನು ಕೂಡ ಆಲಿಸದೆ ಏಕಪಕ್ಷೀಯವಾಗಿ ಒಳ ಮೀಸಲಾತಿ ಜಾರಿಗೊಳಿಸಿದೆ. ಹಾಗೆಯೇ ಸರ್ಕಾರದ ಈ ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣವನ್ನು ನಾವು ಯಾವ ನ್ಯಾಯಾಲಯದಲ್ಲಿಯೂ ಪ್ರಶ್ನೆ ಮಾಡಿ ನ್ಯಾಯವನ್ನು ಪಡೆಯಬಾರದು ಎಂಬ ದುರದ್ದೇಶದಿಂದ ಬೆಳಗಾವಿ ಅಧಿವೇಶನದಲ್ಲಿ ನಮ್ಮ ವಿರುದ್ಧವಾಗಿ ಕಾಯ್ದೆ ರೂಪಿಸಿ ನಮ್ಮ ಸಮುದಾಯಕ್ಕೆ ಮರಣ ಶಾಸನವನ್ನು ಜಾರಿಗೊಳಿಸಿದೆ. ನಮ್ಮ ಬಂಜಾರ ಸಮಾಜದ ಋಣದಲ್ಲಿ ಅಧಿಕಾರಕ್ಕೆ ಬಂದಿರುವ ಈ ಕಾಂಗ್ರೆಸ್ ಸರ್ಕಾರವು ನಮ್ಮ ಸಮಾಜವನ್ನು ಜೀವಂತ ಸಮಾಧಿ ಮಾಡಿದೆ.
ಶಿಕ್ಷಣ, ಉದ್ಯೋಗ, ವಲಸೆ ಸೇರಿದಂತೆ ಕನಿಷ್ಠ ಮೂಲಸೌಕರ್ಯವಿಲ್ಲದೆ ಅತಿ ಹಿಂದುಳಿದಿರುವ ನಮ್ಮ ಸಮುದಾಯದ ಸ್ಥಿತಿಗತಿಗಳನ್ನು ಸರಿಯಾಗಿ ಅವಲೋಕಿಸದೆ ಈ ಒಳಮೀಸಲಾತಿ ಕಾಯ್ದೆ ಜಾರಿಗೊಳಿಸಿದೆ.
ನಮ್ಮನ್ನು ಮೀಸಲಾತಿಯಿಂದ ಹೊರ ದಬ್ಬಲು ಈ ಕಾಯಿದೆ ಜಾರಿಯಾಗಬೇಕೆಂದು ಶತಪ್ರಯತ್ನ ಪಟ್ಟಿರುವ ಸಚಿವ ಮಹದೇವಪ್ಪ ಸೇರಿದಂತೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಎಲ್ಲಾ ಸಚಿವರುಗಳು ಮತ್ತು ಈ ಕಾಯಿದೆ ಜಾರಿಗೆ ಬೆಂಬಲ ನೀಡಿದ ಎಲ್ಲಾ ಶಾಸಕರುಗಳು ನಮ್ಮ ಸಮಾಜಕ್ಕೆ ದ್ರೋಹ ಬಗೆದಿದ್ದಾರೆ, ಈ ಬಾರಿಯ ಜಯಂತಿಯನ್ನು ನಾವು ಕರಾಳ ಜಯಂತಿ ಎಂದು ಆಚರಣೆ ಮಾಡುತ್ತೇವೆ. ಜಯಂತಿಗೆ ಸರಕಾರದ ಅನುದಾನ ಬೇಡ ನಮ್ಮ ಸಮಾಜದವರೆ ದೇಣಿಗೆ ಹಾಕಿ, ಈ ಹಿಂದೆ ಮಾಡುತ್ತಿದ್ದಂತೆ ನಮ್ಮ ತಾಂಡಗಳಿಂದಲೇ ರೊಟ್ಟಿ, ಬುತ್ತಿ ಕಟ್ಟಿಕೊಂಡು ಬಂದು ಜಯಂತಿಯಲ್ಲಿ ಭಾಗವಹಿಸುತ್ತವೆ, CM, DCM ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಿದರೆ ಅವರಿಗೆ ನಮ್ಮ ಸಮಾಜದ ಸಂಘಟನೆಗಳು ಮುತ್ತಿಗೆ ಹಾಕಿ ಕಪ್ಪುಪಟ್ಟಿ ಪ್ರದರ್ಶನ ಮಾಡಿ ಧಿಕ್ಕಾರ ಹಾಕುತ್ತೇವೆ. ಹಾಗೆಯೇ ಮುಂದಿನ ದಿನಗಳಲ್ಲಿ ನಮ್ಮ ತಾಂಡಾ, ಹಟ್ಟಿಗಳಲ್ಲಿ ಅವರುಗಳು ಬಂದರೆ ಮುತ್ತಿಗೆ ಹಾಕಿ ಧಿಕ್ಕಾರ ಹಾಕುತ್ತೇವೆ. ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ ಈ ಸರ್ಕಾರ ತೊಲಗಲು “ಕಾಂಗ್ರೆಸ್ ಹಠಾವೋ ತಾಂಡಾ ಬಚಾವೋ” ಆಂದೋಲನ ಹಮ್ಮಿಕೊಳ್ಳುತ್ತೇವೆ ಹಾಗಾಗಿ ನಮಗೆ ಅನ್ಯಾಯ ಮಾಡಿದ ಸಚಿವ ಮಹದೇವಪ್ಪ ನವರು ಕರೆದ ಪೂರ್ವಭಾವಿ ಸಭೆಗೆ ಯಾರೂ ಸಹ ಭಾಗವಹಿಸದೆ ಸಭೆಯನ್ನು ಬಹಿಸ್ಕರಿಸಬೇಕೆಂದು ನಮ್ಮ ಸಂಘಟನೆಯಿಂದ ವಿನಂತಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್




















