ಕಂಪ್ಲಿ : ಪಟ್ಟಣದ ಚಂದ್ರಕಲಾ ಚಿತ್ರಮಂದಿರದಲ್ಲಿ ತೆರೆ ಕಂಡ ವಿಶ್ವರೂಪಿಣಿ ವಾಸವಿ ಚಿತ್ರಕ್ಕೆ ಆರ್ಯವೈಶ್ಯ ಸಮಾಜದವರು ಚಾಲನೆ ನೀಡಿದರು.
ಆರ್ಯ ವೈಶ್ಯ ಸಮುದಾಯದ ಕುಲದೇವತೆಯಾಗಿರುವ ವಾಸವಿ ಅಮ್ಮ (ಕನ್ಯಕಾ ಪರಮೇಶ್ವರಿ) ತನ್ನ ಕುಲವನ್ನು ಮತ್ತು ಸ್ತ್ರೀಯರನ್ನು ರಕ್ಷಿಸುವ ಉದ್ದೇಶಕ್ಕೆ ಅಗ್ನಿ ಪ್ರವೇಶ ಮಾಡಿದ್ದಾಳೆ. ಇಂದು ಸಮಾಜ ಕಟ್ಟುವ ಕಾರ್ಯಕ್ಕೆ ಅಮ್ಮ ಮಾದರಿಯಾಗಿದ್ದಾರೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಡಿ. ಮಂಜೇಶ್ ಹೇಳಿದರು.
ಇಲ್ಲಿನ ಚಂದ್ರಕಲಾ ಚಿತ್ರಮಂದಿರದಲ್ಲಿ ತೆರೆ ಕಂಡ ‘ವಿಶ್ವರೂಪಿಣಿ ವಾಸವಿ’ ಚಲನ ಚಿತ್ರದ ಪ್ರದರ್ಶನದಲ್ಲಿ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಭಕ್ತಿ ಪ್ರಧಾನ ಬುಧವಾರ ಚಾಲನೆ ನೀಡಿ ಚಿತ್ರಗಳು ಅಪರೂಪ ಎಂಬಂತೆ ಬೆಳ್ಳಿ ತೆರೆಯ ಮೇಲೆ ಬರುತ್ತಿವೆ. ಮಹಿಳೆಯರು ಮತ್ತು ಮಕ್ಕಳು ಸಮೇತ ಇಡೀ ಕುಟುಂಬ ಸದಸ್ಯರು ಕುಳಿತು ನೋಡುವ ಕೌಟಂಬಿಕ ಚಿತ್ರಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ. ಕುಟುಂಬ, ಸಂಸಾರದ ಸ್ವಾಸ್ಥ್ಯ ಕದಡುವ ಧಾರವಾಹಿಗಳಿಂದಾಗಿ ಇಂದು ಸಮಾಜ ದಾರಿ ತಪ್ಪುತ್ತಿದೆ.
ಇದು ಸರಿಯಾಗಬೇಕಾದರೆ ಧರ್ಮ ಜಾಗೃತಿ, ಆಧ್ಯಾತ್ಮ ವಸ್ತು ವಿಷಯದ ಚಿತ್ರಗಳು ಹೆಚ್ಚಾಗಬೇಕಿದ್ದು, ಜನ ಕೂಡ ಇವುಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಶ್ರೀ ವಾಸವಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಧರ್ಮಕರ್ತರು ವೈ. ಚಂದ್ರಮೋಹನ ಶೆಟ್ಟಿ, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಿ.ವಿ. ಸುಬ್ಬರಾವ್, ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಿ. ಶ್ರೀಧರ ಶೆಟ್ಟಿ, ವಾಸವಿ ಅಭಿವೃದ್ಧಿ ಸಂಘದ ಅಧ್ಯಕ್ಷ ಜಿ. ಬಿ ಕೋಟೇಶ್ವರರಾವ್, ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಟಿ. ರಾಮಾದೇವಿ ಹಾಗೂ ಸಮಾಜ ಬಾಂಧವರು ಸೇರಿದಂತೆ ಮತ್ತಿತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















