
ಗಂಗಾವತಿ : ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಸಾರಿಗೆ ಸಂಸ್ಥೆಯ ವಾಹಾನ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ತಂದೆ ಮತ್ತು ಮಗಳಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಢಣಾಪುರ ಕ್ರಾಸ್ ಮಾರುತಿ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತರನ್ನು ಢಣಾಪುರ ಗ್ರಾಮದ ಗಾರೆ ಕೆಲಸಗಾರ ಖಾಜಾಸಾಬ್ ಮೋದಿನ್ ಸಾಬ (55) ಹಾಗೂ ಆತನ ಪುತ್ರಿ, ಸರ್ಕಾರಿ ಶಾಲೆಯ ಎಂಟನೇ ತರಗತಿಯ ವಿದ್ಯಾ ರ್ಥಿನಿ ಆಸೀನ್ ಖಾಜಾಸಾಬ್ (14) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಖಾಜಾಸಾಬ್ ಮತ್ತು ಆತನ ಕುಟುಂಬ ಕೆಲಸ ಅರಸಿ ಢಣಾಪುರಕ್ಕೆ ಒಂದೂವರೆ ದಶಕದ ಹಿಂದೆ ಆಗಮಿಸಿತ್ತು. ಊರಲ್ಲಿ ಕೆಲಸ ಇಲ್ಲದ ಕಾರಣ, ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ರಜೆ ಹಿನ್ನೆಲೆ ಊರಿಗೆ ಬಂದಿದ್ದ ಖಾಜಾಸಾಬ್ ತನ್ನ ಮಗಳಿಗೆ ಗಂಗಾವತಿಯಲ್ಲಿ ಬಟ್ಟೆ ಕೊಡಿಸಿಕೊಂಡು ಮರಳಿ ಗ್ರಾಮಕ್ಕೆ ಹೋಗುವ ಸಂದರ್ಭದಲ್ಲಿ ಕಾರಟಗಿಯಿಂದ ಬಂದ ಸಾರಿಗೆ ಇಲಾಖೆಯ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಎಸ್ ಪಿ ರಾಮ್ ಎಲ್ ಅರಸಿದ್ದಿ, ಹೆಚ್ಚುವರಿ ಎಸ್ ಪಿ ಹೇಮಂತ್ ಕುಮಾರ್ ಮತ್ತು ಗ್ರಾಮಿಣ ಸಿಪಿಐ ರಂಗಪ್ಪ ದೊಡ್ಡನಿ ಭೇಟಿ ನೀಡಿದರು. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















