ಬೆಂಗಳೂರು : ಆನಂದ್ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಬಿ ಹೆಚ್ ಶ್ರೀಧರ್ ಅವರ ಬದುಕು ಬರಹ ಕುರಿತು ಮಾತನಾಡುತ್ತಾ ಹಿರಿಯ ಸಾಹಿತಿ ಎಲ್ ಎಸ್ ಶಾಸ್ತ್ರಿ ಅವರು ಶ್ರೀಧರರು ಎಷ್ಟು ಕಷ್ಟಪಟ್ಟು ಓದಿದರು ಹಾಗೂ ಅವರು ಎಂತೆಂತಹ ಮಹಾಮಹಿಮರ ಸಾಂಗತ್ಯದಿಂದ ತಮ್ಮ ವಿದ್ವತ್ತನ್ನು ಬೆಳೆಸಿಕೊಂಡರು ಹಾಗೂ ತಮ್ಮ ಎಡೆಬಿಡದ ಬರವಣಿಗೆಯಿಂದ, ಬೋಧನೆಯಿಂದ ಎಷ್ಟು ಜನಪ್ರಿಯರಾಗಿದ್ದರು ಎಂಬುದನ್ನು ತಿಳಿಸಿ ಹೇಳಿದರು. ಏಳೆಂಟು ಸಾವಿರಕ್ಕೂ ಹೆಚ್ಚು ಪುಟಗಳಿರುವ ಅವರ ಸಾಹಿತ್ಯಿಕ ಬರಹಗಳನ್ನು ಹಲವು ಸಂಪುಟಗಳಲ್ಲಿ ಕ್ರೋಢೀಕರಿಸಿದ್ದು ಅವು ಜನರಿಗೆ ತಲುಪುವಂತಾಗಬೇಕು ಎಂದು ನುಡಿದರು. ಬಿ ಹೆಚ್ ಶ್ರೀಧರರ ಕೃತಿಗಳು ಸಂಚಯದ ಶ್ರೀ ಓಂ ಶಿವಪ್ರಕಾಶರಿಂದ ಡಿಜಿಟಲೀಕರಣಗೊಂಡಿದ್ದು ಆಸಕ್ತರ ಓದಿಗೆ ಉಚಿತವಾಗಿ ಲಭ್ಯವಿದೆ. ಅದಕ್ಕೂ ಮೊದಲು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ
ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ, ಸಾಹಿತಿ, ವಿಮರ್ಶಕ ನಾರಾಯಣ ಯಾಜಿ ಸಾಲೇಬೈಲು ಅವರು ಕಿಷ್ಕಿಂಧಾ ಕಾಂಡದಲ್ಲಿ ಬರುವ ವಾಲಿ, ಸುಗ್ರೀವ, ಅಂಗದ, ಹನುಮಂತನ ಕುರಿತು, ಅವರ ಸಾಹಸದ ಕುರಿತು ,ರಾಮ, ಲಕ್ಷ್ಮಣರೊಡನೆ ಅವರ ಸಂವಹನ ಮುಂತಾದ ಗಹನವಾದ ವಿಷಯಗಳನ್ನು ತಮ್ಮ ಉಪನ್ಯಾಸದುದ್ದಕ್ಕೂ ತಿಳಿಸಿದರು. ಮುಖ್ಯವಾಗಿ ವಾಲಿಯ ಪತ್ನಿ ತಾರೆಯ ಕುರಿತು, ಅವಳು ವಾಲಿ, ಲಕ್ಷಣ, ರಾಮನ ಜೊತೆ ನಡೆಸಿದ ಸಂವಾದ, ಅವಳ ಚತುರತೆಯ ಕುರಿತು ತಿಳಿಸುತ್ತಾ ಬಲು ಸೊಗಸಾದ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಹುಭಾಷಾ ತಜ್ಞ ಶಾ. ಮಂ. ಕೃಷ್ಣರಾಯರು, ಬಿ. ಎಚ್. ಶ್ರೀಧರರ ಮನೆ ಎಲ್ಲರಿಗೂ ಆತಿಥ್ಯ ನೀಡಿದ್ದು ನಮ್ಮಂತಹ ಸಾಹಿತಿಗಳು ಬೆಳೆಯಲು ಸಲಹೆ ನೀಡಿ, ಅನುಕೂಲ ಮಾಡಿಕೊಡುತ್ತಿದ್ದರು, ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿ ಅವರನ್ನು, ಅವರ ಪತ್ನಿಯನ್ನು ಬಹುವಾಗಿ ಸ್ಮರಿಸಿದರು. ಸಪ್ತಕದ ಜಿ ಎಸ್ ಹೆಗಡೆಯವರು ಸಂಘಟನೆಯ ಕಷ್ಟದ ಕುರಿತು ಸಮಯೋಚಿತವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಸಿದ್ಧ ಅರ್ಥದಾರಿಗಳ ಅನುಕರಣೆ ಕಾರ್ಯಕ್ರಮ ನೀಡಿದ ವಿಠ್ಠಲ ಪುರಾಣಿಕ ಅವರನ್ನು ಸುಜಯ್ ನಾಗರಾಜ್ , ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ನೂತನ ದೋಶೆಟ್ಟಿ ಹಾಗೂ ಬಿ ಹೆಚ್ ಶ್ರೀಧರ್ ಅವರ ಮಗಳು ರಾಜೇಶ್ವರಿ ಹೆಬ್ಬಾರ ಸನ್ಮಾನಿಸಿದರು.
ಕೊಪ್ಪರಂ ಅನ್ನಪೂರ್ಣ, ವತ್ಸಲಾ ರಾವ್, ಪ್ರಭಾಕರ ಗಂಗೊಳ್ಳಿ ,ಸಿದ್ದಣ್ಣ ಸೊನ್ನದ, ಗೀತಾ ಸಭಾಹಿತ, ಝಾಂಸಿ ಭಟ್ ಅವರಿಂದ ಭೂಮಿ ಬುಕ್ಸ್ ನ ಪ್ರಕಾಶಕಿ ವಿಶಾಲಕ್ಷಿ ಶರ್ಮ ವಿರಚಿತ ಅಘನಾಶಿನಿ ಉಳಿಸಿ ಪರಿಸರ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಅಣಕಟ್ಟು ಮಧುಸೂದನ ರಾವ್ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಿ ಸತ್ಯನಾರಾಯಣ, ಎಸ್ ಪಿ ಸುರೇಶ್, ವಾಸುದೇವ ಕಾರಂತ, ಕೆ ಜಿ ಕಾರ್ಣಿಕ್, ಪ್ರಕಾಶ ಪೂರ್ಣಮಠ, ಚಂದ್ರಶೇಖರ ಶಿಡ್ಲಘಟ್ಟ, ಸುಹಾಸಿನಿ ಜಡ್ಡಿಪಾಲ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ




















