
ತೇರದಾಳ: ಹಿಂದೂ ಸಮ್ಮೇಳನ ಯಾರದೋ ವಿರುದ್ಧದ ಪ್ರತಿಭಟನೆಗೆ ಅಲ್ಲ. ಇದು ಹಿಂದುಗಳನ್ನೆಲ್ಲಾ ಒಗ್ಗೂಡಿಸುವುದಕ್ಕಾಗಿ, ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು, ನಾವೆಲ್ಲಾ ಬಂಧು ಎಂಬುದನ್ನು ಯಾರೂ ಮರೆಯಬಾರದು. ಭಾರತದ ಇತಿಹಾಸ ಈ ಜಗತ್ತಿನ ಇತಿಹಾಸದಷ್ಟೇ ಪ್ರಾಚೀನವಾದುದು. ಈ ಭಾರತದ ಜನ್ಮವೇ ಜಗತ್ತನ್ನೇ ಸುಸಂಸ್ಕೃಗೊಳಿಸಲು ಆಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕರ್ನಾಟಕ ಉತ್ತರಭಾಗದ ಪ್ರಾಂತ ಪ್ರಚಾರಕರಾದ ನರೇಂದ್ರ ಜೀ ಹೇಳಿದರು.
ಜ.೨೭ ರಂದು ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಸಂಚಾಲನಾ ಸಮೀತಿ ತೇರದಾಳ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ “ಬೃಹತ್ ಹಿಂದೂ ಸಮ್ಮೇಳನ” ಉದ್ದೇಶಿಸಿ ಮಾತನಾಡಿದ ಅವರು ಜಗತ್ತಿಗೆ ಮಾತಾಡುವುದನ್ನು, ಬಟ್ಟೆ ಧರಿಸುವುದನ್ನು, ಅಷ್ಟೇ ಅಲ್ಲ ಮನುಷ್ಯರಂತೆ ಬದುಕುವುದನ್ನು ನಮ್ಮ ಭಾರತ ಕಲಿಸಿಕೊಟ್ಟಿದೆ. ಇದಕ್ಕಾಗಿಯೇ ಈ ಜಗತ್ತು ನಮ್ಮನ್ನು ವಿಶ್ವಗುರು ಎಂದಿದೆ. ನಮ್ಮ ದೇಶವನ್ನು ಸುಭದ್ರಗೊಳಿಸಲು ಸಹಸ್ರ ಸಹಸ್ರ ಸಾಧುಸಂತರು ಧೇಶಭಕ್ತರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ ನಮ್ಮ ದೇಶಕ್ಕೆ ಬಂದ ಬ್ರಿಟೀಶರು ನಮ್ಮ ದೇಹಕ್ಕಿಂತ ಮೆದುಳಿನ ಮೇಲೆ ಆಘಾತಮಾಡಿದರು ಹೀಗಾಗಿ ನಮ್ಮನ್ನು ನೂರಾರು ವರ್ಷದ ಕಾಲ ಆಳಿದರು. ಜ್ಞಾನದಲ್ಲಿ, ಪರಾಕ್ರಮದಲ್ಲಿ, ಸಂಪತ್ತಿನಲ್ಲಿ ಹೀಗೆ ಯಾವುದರಲ್ಲಿಯೂ ನಾವು ಕಡಿಮೆ ಇಲ್ಲ ಆದರೆ ಎಲ್ಲೊ ಒಂದು ಕಡೆ ನಮ್ಮತನವನ್ನು ಮರೆತು ಪರಸ್ಪರ ದೂರಸರಿಯುತ್ತಿರುವುದು ಸರಿಯೇ?.
ಪ್ರತಿಯೊಬ್ಬನು ನಾನು ಯಾರು? ನಾನೇಕೆ ಬದುಕಿದ್ದೇನೆ? ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಭಾರತ ಮಾತಾಕಿ ಜೈ ಎಂದು ನಮ್ಮೆಲ್ಲರ ತಾಯಿ ಭಾರತಮಾತೆ ಎಂದು ಒಪ್ಪಿಕೊಳ್ಳುತ್ತೇವೆ. ಹೀಗಿರುವಾಗ ಜಾತಿಗಾಗಿ, ಭಾಷೆಗಾಗಿ ಬಡಿದಾಡುವುದೇಕೆ? ನಮ್ಮೆದುರುಗಿರುವ ವ್ಯಕ್ತಿಯೂ ಸಹ ನಮ್ಮಂತೆ ಮನುಷ್ಯ ಎಂದು ಗೊತ್ತಿದ್ದೂ ಭೇಧ ಮಾಡುವುದು ಎಷ್ಟು ಸರಿ? ಈ ತಾರತಮ್ಯಗಳೇ ನಮ್ಮ ಸಮಾಜವನ್ನು ದುರ್ಬಲಗೊಳಿಸುತ್ತವೆ. ಅಸ್ಪೃಶ್ಯತೆಯನ್ನು ಯಾವ ಶಾಸ್ತ್ರವೂ ಒಪ್ಪಿಕೊಳ್ಳುವುದಿಲ್ಲ, ಕಾರಣ ನಾವೆಲ್ಲರೂ ಒಂದೇ ತಾಯಿ ಮಕ್ಕಳು. ಪಾಶ್ಚಾತರ ನಕಲು ಮಾಡಲು ಹೋಗಿ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಪರಸ್ಪರರಲ್ಲಿ ಆತ್ಮೀಯತೆ ಮೂಡಿಸಬೇಕಾಗಿದೆ. ನಮ್ಮ ಇಡೀ ಊರೇ ಒಂದು ಕುಟುಂಬ ಎನ್ನುವ ರೀತಿಯಲ್ಲಿ ಬದುಕಬೇಕಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಇನ್ನಷ್ಟು ಹಸಿ ಮಾಡಿ ಮುಂದಿನ ಪೀಳಿಗೆಗೆ ಸುಂದರ ಸಮಾಜವನ್ನು ನೀಡಬೇಕಾಗಿದೆ.
ನಮ್ಮ ಪೂರ್ವಜರು ಭಾರತದಲ್ಲಿರುವ ೩೫೦೦ ನದಿಗಳನ್ನು ದೇವರೆಂದು ಪೂಜಿಸಿದರು ಆದರೆ ನಾವು ಪವಿತ್ರವಾದ ನದಿಗಳನ್ನು ಅಪವಿತ್ರಗೊಳಿಸಿದ್ದೇವೆ. ಇದರ ಬಗ್ಗೆ ಜಾಗೃತಿಗೊಳ್ಳುವ ಅವಶ್ಯಕತೆ ಇದೆ. ಹುಟ್ಟು ಹಬ್ಬಗಳಲ್ಲಿ ಒಂದು ಸಸಿಯನ್ನು ನೆಟ್ಟು ಮುಂದಿನ ಪೀಳಿಗೆಗೆ ಉಪಕಾರ ಮಾಡುವ ಅವಶ್ಯಕತೆ ಇದೆ. ನಾನು ಭಾರತದಂತೆ ಬದುಕುತ್ತಿದ್ದೇನೆಯೇ? ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತ ಅಭಿಮಾನ ಈಗ ಇದೆಯಾ? ನಾಗರಿಕ ಹಕ್ಕುಗಳ ಬಗ್ಗೆ ಸಾಕಷ್ಟು ಚರ್ಚೆಮಾಡುತ್ತೇವೆ ಆದರೆ ನಾಗರಿಕ ಕರ್ತವ್ಯಗಳ ಯಾರಾದರೂ ಪ್ರಶ್ನಿಸುವರೆ? ಹೊರಗಡೆ ಮತಾಂತರ,ಲವ್ಜಿಹಾದ್, ಮಾದಕದ್ರವ್ಯಗಳ ಹೀಗೆ ಅನೇಕ ಸಮಸ್ಯೆಗಳನ್ನು ಕಾಣುತ್ತೇವೆ. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಕೇವಲ ಹಿಂದೂ ಸಮಾಜಕ್ಕೆ ಮಾತ್ರ ಇದೆ. ನಮ್ಮ ಹಿಂದೂ ಸಂಘಟಣೆ ಮತ್ತೊಬ್ಬರನ್ನು ದ್ವೇಷಿಸಲು ಅಥವಾ ದೌರ್ಜನ್ಯ ಮಾಡಲು ಅಲ್ಲ. ನಮ್ಮ ತಾಯಿಯನ್ನು ಬೇರೆ ಯಾರೂ ಕೆಟ್ಟದೃಷ್ಟಿಯಿಂದ ನೋಡಬಾರದು ಎಂಬುದೇ ಇದರ ಮೂಲ ಉದ್ದೇಶವಾಗಿದೆ ಎಂದರು.
ವೇದಿಕೆಯಲ್ಲಿ ಹಳಿಂಗಳಿಯ ಪೂ.ಶಿವಾನಂದ ಶ್ರೀಗಳು ಮಾತನಾಡಿದರು. ಪೂ.ಗಂಗಾಧರ ಶ್ರೀಗಳು ಸಾನಿಧ್ಯ ನುಡಿಗಳನ್ನಾಡಿದರು.
ಡಾ.ಪುಷ್ಪದಂತ ದಾನಿಗೊಂಡ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ರಾಮಣ್ಣ ಹಿಡಕಲ್ ಸ್ವಾಗತಿಸಿದರು.
ಕುಮಾರಿ ಸಂಜೀವಿನಿ ಭರತ ನಾಟ್ಯ ಮಾಡಿ ಜನಮನ ಸೆಳೆದರು.
ಎಂ.ಬಿ.ಮಾಳೆದ ನಿರೂಪಿಸಿ ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















