
ಗುರಮಠಕಲ್: ತಾಲೂಕಿನ ಕಂದಕೂರ್ ಗ್ರಾಮದಲ್ಲಿ ಮಾಜಿ ಶಾಸಕ ಲಿಂ. ನಾಗನಗೌಡ ಕಂದಕೂರ ಅವರ ದ್ವಿತೀಯ ಪುಣ್ಯಸ್ಮರಣೆ ಬುಧವಾರ ಭಕ್ತಿಭಾವ ಹಾಗೂ ಜನಸಾಗರದ ಮಧ್ಯೆ ಅರ್ಥಪೂರ್ಣವಾಗಿ ನೆರವೇರಿತು.
ಅವರ ತೋಟದಲ್ಲಿರುವ ಸ್ಮಾರಕವನವು ಪುಷ್ಪಾಲಂಕಾರದಿಂದ ಕಂಗೊಳಿಸಿ ಭಕ್ತರ ಗಮನ ಸೆಳೆಯಿತು. ಬೆಳಿಗ್ಗೆ ಕಂದಕೂರ್ ಪರಿವಾರದಿಂದ ಶಾಸ್ತ್ರೋಕ್ತ ಪೂಜೆಯೊಂದಿಗೆ ಸಮಾಧಿಗೆ ನಮನ ಸಲ್ಲಿಸಲಾಯಿತು.
ಮಧ್ಯಾಹ್ನ ವೇಳೆಗೆ ಯಾದಗಿರಿ, ಕಲಬುರಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಿಂದ ಸಾವಿರಾರು ಅಭಿಮಾನಿಗಳು ಹಾಗೂ ಒಡನಾಡಿಗಳು ಸಾಗರೋಪಾದಿಯಲ್ಲಿ ಸಾಗಿ ಬಂದರು.
ಕಂದಕೂರ್ ಪರಿವಾರದ ಅಚ್ಚುಕಟ್ಟು ಆತಿಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು 6 ರಿಂದ 7 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು, ಮೂರು ಎಕರೆ ಪ್ರದೇಶದಲ್ಲಿ ವಿಶಾಲ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರು ಹಾಗೂ ತಾಯಂದಿರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪುಷ್ಪನಮನ ಸಲ್ಲಿಸಿದರು. ಜಿಲ್ಲೆಯ ವಿವಿಧ ಮಠಾಧೀಶರು ವಿಶೇಷ ಪೂಜೆ ನೆರವೇರಿಸಿದರು. ನಾಗನಗೌಡರು ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜನಸೇವೆ ಮತ್ತು ಆತಿಥ್ಯಕ್ಕೆ ಸದಾ ಆದ್ಯತೆ ನೀಡಿದವರು.
ಕಾರ್ಯಕ್ರಮದಲ್ಲಿ ಸಿದ್ರಾಮಪ್ಪಗೌಡ ಯಕ್ಷಂತಿ, ಗೌಡಪ್ಪಗೌಡ ಮದರ್ಕಲ್, ಶ್ರೀನಿವಾಸರೆಡ್ಡಿ ಕಂದಕೂರ್, ಡಾ. ಅಶೋಕರೆಡ್ಡಿ ವಡವಟ್, ರಾಜೇಂದ್ರರೆಡ್ಡಿ ಹಂಚಿನಾಳ, ಮಲ್ಲಿಕಾರ್ಜುನರೆಡ್ಡಿ ಕಂದಕೂರ್, ಶಾಸಕ ಶರಣಗೌಡ ಕಂದಕೂರ್, ಮಹೇಂದ್ರರೆಡ್ಡಿ ಕಂದಕೂರ್, ವೆಂಕಟರೆಡ್ಡಿ ಯಕ್ಷಂತಿ, ಸುಜೀವ್ ಪಾಟೀಲ್ ಮಾನ್ವಿ, ರಾಕೇಶರೆಡ್ಡಿ ಯಕ್ಷಂತಿ, ಲಿಂಗಣ್ಣಗೌಡ ಕೊಡಮ್ನಳ್ಳಿ, ಡಾ. ಅಶೋಕರೆಡ್ಡಿ ಅಮೀನಗಡ ಸೇರಿದಂತೆ ಕಂದಕೂರ್ ಪರಿವಾರದ ಸದಸ್ಯರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಜೆ. ಎಸ್. ಭೂಮಾ



















