ಬಳ್ಳಾರಿ/ ಕಂಪ್ಲಿ : ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾಧಿಕಾರಿ ಮೌನೇಶ್ ಹೇಳಿದರು.
ಸ್ಥಳೀಯ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಇಲಾಖೆಯ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಮಕ್ಕಳನ್ನು ಕೆಲಸದಿಂದ ಮುಕ್ತಿಗೊಳಿಸಿ, ಮುಖ್ಯವಾಹಿನಿಗೆ ತರಲು ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗಿದೆ.
ಈ ಸಮಿತಿಗಳ ಮೂಲಕ ಮಕ್ಕಳ ರಕ್ಷ ಣೆ ಮಾಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಲಿನ ಪ್ರದೇಶದಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಸಮಿತಿಗೆ ಹಾಗೂ ಬಾಲಕಾರ್ಮಿಕ, ಮಕ್ಕಳ ಇಲಾಖೆಗೆ ಗಮನಕ್ಕೆ ತರಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವಂತಹ ಕೆಲಸವಾಗಬೇಕು.
ಶಾಲೆಯ ಮುಖ್ಯಗುರುಗಳು ಮಕ್ಕಳಿಗೆ ಮ್ಯಾನುವಲ್ ಆಗಿ ಟಿಸಿ ಕೊಡಬಾರದು. ಈ ರೀತಿ ಕೊಟ್ಟರೆ, ಪೋಷಕರು ಟಿಸಿಯನ್ನು ಮನೆಯಲ್ಲಿಟ್ಟುಕೊಂಡು ಮಕ್ಕಳ ಭವಿಷ್ಯ ಹಾಳು ಮಾಡಲಿದ್ದಾರೆ. ಗೂಡ್ಸ್ ವಾಹನದಲ್ಲಿ ಜನರನ್ನು ಕರೆದುಕೊಂಡು ಬರುವ ವಾಹನಗಳ ಪರವಾನಿಗೆ ರದ್ದುಪಡಿಸಬೇಕು. ಮುಂದಿನ ದಿನದಲ್ಲಿ ರೆಸ್ಟೋರೆಂಟ್ ಗಳಿಗೆ ಭೇಟಿ ಮಾಡಿ, ಪರಿಶೀಲನೆ ನಡೆಸಲಾಗುವುದು ಎಂದರು.
ಶಿರಸ್ತೇದಾರ ಪಂಪಾಪತಿ ಮಾತನಾಡಿ, ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಸಂಪೂರ್ಣವಾಗಿ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಕಾರ ಅಗತ್ಯ’ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಪಿಎಸ್ ಐ ಅವಿನಾಶ್, ಜಿಲ್ಲಾ ತಂಬಾಕು ನಿಷೇಧ ಇಲಾಖೆಯ ಜಿಲ್ಲಾ ಸಲಹೆಗಾರ ಪ್ರಶಾಂತ್, ಇಸಿಒ ಟಿಎಂ ಬಸವರಾಜ, ನಿಲಯ ಪಾಲಕ ಗಾದಿಲಿಂಗಪ್ಪ, ಅಂಗನವಾಡಿ ಮೇಲ್ವಿಚಾರಕಿ ಲತೀಫಾಬೇಗಂ, ಆರೋಗ್ಯ ಇಲಾಖೆಯ ಬಸವರಾಜ, ಕಾರ್ಮಿಕ ಇಲಾಖೆಯ ಡಿಒ ವಿಘ್ನೇಶ್ವರ ಸೇರಿದಂತೆ ಇತರರು ಇದ್ದರು. ನಂತರ ತಂಬಾಕು ನಿರ್ಮೂಲನೆಯ ದೃಷ್ಟಿಯಿಂದ ಸಾರ್ವಜನಿಕರ ಮೂಲಕ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















