ಬಳ್ಳಾರಿ: ಅಕ್ರಮವಾಗಿ ಯೂರಿಯಾ ಗೊಬ್ಬರ ಸ್ಟಾಕ್ ಇಟ್ಟಿದ್ದ ಗೋಡೌನ್ ಮೇಲೆ ಅಧಿಕಾರಿಗಳ ದಾಳಿ ನಡೆಸಿರುವ ಘಟನೆ ಬಳ್ಳಾರಿ ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.
ರೈತರಿಗೆ ಸೇರಬೇಕಾದ ಯೂರಿಯಾ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹುನ್ನಾರ ನಡೆಸಲಾಗಿದೆ ಎಂಬ ಶಂಕೆಯಿದೆ. ಸದ್ಯಕ್ಕೆ ಬಳ್ಳಾರಿಯ ಮಾರುಕಟ್ಟೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಇಲ್ಲ. ಟಿಬಿ ಡ್ಯಾಂ ಗೇಟ್ ರಿಪೇರಿ ಹಿನ್ನೆಲೆ ಬಳ್ಳಾರಿಯಲ್ಲಿ ಬಹುತೇಕ ರೈತರು ಎರಡನೇ ಬೆಳೆ ಬೆಳೆದಿಲ್ಲ. ಹಾಗಾದರೆ ಯೂರಿಯಾ ಗೊಬ್ಬರ ಯಾಕಾಗಿ ಸ್ಟಾಕ್ ಮಾಡಿದ್ರು ಅನ್ನೊ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಜೂನ್ ತಿಂಗಳ ಮುಂಗಾರು ವೇಳೆ ಯೂರಿಯಾ ಗೊಬ್ಬರಕ್ಕೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ ಹೀಗಾಗಿ ಈಗಿನಿಂದಲೇ ಸ್ಟಾಕ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ವರ್ಷ ಯೂರಿಯಾ ಗೊಬ್ಬರಕ್ಕೆ ಭಾರೀ ಬೇಡಿಕೆ ಬಂದಿತ್ತು. ಯಾವ ಅಂಗಡಿಗೆ ಹೋದರೂ ಯೂರಿಯಾ ಗೊಬ್ಬರ ನೋ ಸ್ಟಾಕ್ ಎಂಬ ಬೋರ್ಡ್ ಇರುತ್ತಿತ್ತು. ಹೀಗಾಗಿ ಈಗಿನಿಂದಲೇ ಯೂರಿಯಾ ಗೊಬ್ಬರ ಸ್ಟಾಕ್ ಮಾಡಲು ಹುನ್ನಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಈ ಸಂಬಂಧ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















