ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು, ವಿಶೇಷವಾಗಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಮಾರೋಪಾದಿಯಲ್ಲಿ ಕಠಿಣ ಕಾರ್ಯಾಚರಣೆಯನ್ನು ಆರಂಭಿಸಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅವರು ನೀಡಿದ ಮಾಹಿತಿಯಂತೆ, ರಾಜ್ಯಾದ್ಯಂತ ಈಗಾಗಲೇ 370 ಅಕ್ರಮ ವಲಸಿಗರನ್ನು ಗುರುತಿಸಲಾಗಿದ್ದು, ಈ ಪೈಕಿ 196 ಮಂದಿಯನ್ನು ಯಶಸ್ವಿಯಾಗಿ ಗಡಿಪಾರು (ಡಿಪೋರ್ಟ್) ಮಾಡಲಾಗಿದೆ.
ಕೊಡಗು, ಹಾಸನ ಹಾಗೂ ಚಿಕ್ಕಮಂಗಳೂರು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಪತ್ತೆಹಚ್ಚಲು ಸರ್ಕಾರವು ವಿಶೇಷ ತನಿಖಾ ತಂಡ (SIT) ಹಾಗೂ ಪ್ರತ್ಯೇಕ ಟಾಸ್ಕ್ ಫೋರ್ಸ್‌ಗಳನ್ನು ರಚಿಸಿದೆ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಭಾಗಗಳಲ್ಲಿ ಪೊಲೀಸರು ಮನೆ ಮನೆ ತಪಾಸಣೆ ನಡೆಸುತ್ತಿದ್ದು, ನಕಲಿ ಆಧಾರ್ ಕಾರ್ಡ್‌ಗಳ ಮೂಲಕ ನೆಲೆಸಿದ್ದ ಹಲವರನ್ನು ಬಂಧಿಸಲಾಗಿದೆ.
ಅಕ್ರಮ ವಲಸಿಗರಿಗೆ ಆಶ್ರಯ ನೀಡುವ ಮನೆ ಮಾಲೀಕರ ಹಾಗೂ ಸಹಕಾರ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಸೂಚನೆ ನೀಡಿದೆ.
ಈ ಕಾರ್ಯಾಚರಣೆ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಅಕ್ರಮ ವಲಸಿಗರ ಬಗ್ಗೆ ಸುಳಿವು ನೀಡುವವರ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿಟ್ಟುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ.
ವರದಿ ಬಸವರಾಜ ಎಸ್. ಎನ್



















