ಬೆಳಗಾವಿ: ರೈತರಿಗೆ ಸಾಲ ನೀಡುವುದರಿಂದ ಬಿಡಿಸಿಸಿ ಬ್ಯಾಂಕ್‌ಗೆ ನಷ್ಟ ಉಂಟಾಗುತ್ತದೆ ಎಂಬ ಹೇಳಿಕೆಯಿಂದ ರೈತರ ಕೆಂಗಣ್ಣಿಗೆ ಗುರಿಯಾಗಿದ್ದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಬ ಜೊಲ್ಲೆ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ.
ರಾಮದುರ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪತ್ರಿಕಾಗೋಷ್ಠಿ ವೇಳೆ ನಾನು ಡಿಸಿಸಿ ಬ್ಯಾಂಕ್ ಸಾಲಗಳ ಕುರಿತು ಮಾತನಾಡಿದ್ದೆ. ನನ್ನ ಹೇಳಿಕೆಯಿಂದ ರೈತ ಬಂಧುಗಳಿಗೆ ನೋವಾಗಿದ್ದರೆ ನಾನು ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಜೊಲ್ಲೆ ಅವರ ಹೇಳಿಕೆ ಹೊರಬಿದ್ದ ತಕ್ಷಣ ಜಿಲ್ಲೆಯಾದ್ಯಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು. ವಿವಿಧ ಸಂಘಟನೆಗಳು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿ, ರೈತರಿಗೆ ಸಾಲ ನೀಡುವುದು ಬ್ಯಾಂಕಿನ ಜವಾಬ್ದಾರಿ ಎಂದು ಆಗ್ರಹಿಸಿದ್ದವು.
ಈ ನಡುವೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿ, ರೈತರಿಗೆ ಸಾಲ ನೀಡಲೇಬೇಕು” ಎಂದು ಹೇಳುವ ಮೂಲಕ ರೈತರ ಪರ ನಿಲುವು ತೋರಿದ್ದರು.
ಇದೀಗ ಜೊಲ್ಲೆ ಅವರ ಕ್ಷಮೆಯಾಚನೆಯಿಂದ ಉಂಟಾದ ವಿವಾದಕ್ಕೆ ಸ್ವಲ್ಪ ಮಟ್ಟಿಗೆ ತಣಿವು ಸಿಕ್ಕಂತಾಗಿದೆ. ರೈತ ಸಮುದಾಯದ ಭಾವನೆಗಳಿಗೆ ಗೌರವ ನೀಡುವ ಮೂಲಕ ಅವರು ಸ್ಪಷ್ಟನೆ ನೀಡಿರುವುದು ಗಮನಾರ್ಹವಾಗಿದೆ.!
ವರದಿ. ವಿಠ್ಠಲ ಖೋಕಾಟೆ




















