ಬಳ್ಳಾರಿ/ ಕಂಪ್ಲಿ : ಪಟ್ಟಣದ ಗಂಗಾ ಸಂಕೀರ್ಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಮಂಗಳವಾರ ಹಮ್ಮಿಕೊಂಡಿದ್ದ 187ನೇ ಮಹಾಮನೆ ಕಾರ್ಯಕ್ರಮ ನಡೆಯಿತು.
ಎಮ್ಮಿಗನೂರಿನ ಶತಮಾನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತಿಥಿ ಶಿಕ್ಷಕ ಎಸ್. ರಾಮಪ್ಪ
‘ಶರಣ ವಿಚಾರಧಾರೆ’ ಕುರಿತು ಉಪನ್ಯಾಸ ನೀಡಿ, ಬಸವಾದಿ ಶರಣರ ವಿಚಾರಧಾರೆ ಜಾತಿ, ಮತ, ಲಿಂಗ ತಾರತಮ್ಯರಹಿತ ಸಮಾನತೆ, ಕಾಯಕವೇ ಕೈಲಾಸ, ಮತ್ತು ದಯೆಯೇ ಧರ್ಮದ ಮೂಲ ಎಂಬ ತತ್ವಗಳನ್ನು ಪ್ರತಿಪಾದಿಸುತ್ತದೆ. 12ನೇ ಶತಮಾನದ ಈ ವಚನಕಾರರು ವೈಚಾರಿಕತೆ, ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳು, ಹಾಗೂ ಸರ್ವರಿಗೂ ಸಮಬಾಳು ಎಂಬ ಕ್ರಾಂತಿಕಾರಿ ಬದಲಾವಣೆಗೆ ಬುನಾದಿ ಹಾಕಿದರು, ಇದು ಇಂದಿನ ಸಮಾಜಕ್ಕೂ ಮಾರ್ಗದರ್ಶಿಯಾಗಿದೆ. ಕಾಯಕ, ದಾಸೋಹ, ಲಿಂಗ ಸಮಾನತೆಯನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ. ಶರಣ ಸಾಹಿತ್ಯವು ಮಾನವೀಯ ನೆಲೆಯಲ್ಲಿ ಬದುಕನ್ನು ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಸಮಾಜದಲ್ಲಿನ ವಿಷಮತೆಗೆ ಸಂಸ್ಕಾರದ ಕೊರತೆ ಕಾರಣವಾಗಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಪೋಷಕರು ನಿಗಾವಹಿಸುತ್ತಿಲ್ಲ. ಮಕ್ಕಳಿಗೆ ದಿನಕ್ಕೊಂದು ವಚನಗಳ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯತೆಯಿದೆ. ಪ್ರಕೃತಿ ವಿಕೋಪಕ್ಕೆ ಮನುಷ್ಯನ ದುರಾಸೆಗಳೇ ಕಾರಣ. ಸ್ವ ಬದಲಾವಣೆಯಿಂದ ಮಾತ್ರ ಕುಟುಂಬ ಮತ್ತು ಸಮಾಜ ಬದಲಾವಣೆ ಸಾಧ್ಯ ಎಂದು ಹೇಳಿದರು.
ಎಮ್ಮಿಗನೂರಿನ ಸ. ಹಿ. ಪ್ರಾ. ಶಾಲೆ ಅತಿಥಿ ಶಿಕ್ಷಕ ಎಚ್.ಮಲ್ಲೇಶ್ ಮಾತನಾಡಿ, ಯುವಜನತೆ ದುಶ್ಚಟಗಳಿಗೆ ಈಡಾಗುತ್ತಿರುವುದು ಆತಂಕಕಾರಿಯಾಗಿದೆ. ಯುವಜನತೆ ದುಶ್ಚಟಗಳಿಂದ ವಿಮುಕ್ತರಾಗಲು ಮಹಾಮನೆ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಮಾತನಾಡಿ, ಪುರಾಣ ಪರಂಪರೆಯಲ್ಲಿನ ಆದರ್ಶ ವ್ಯಕ್ತಿಗಳ ತತ್ವಗಳನ್ನು ಅರಿತು ಅಳವಡಿಸಿಕೊಳ್ಳಬೇಕು. ಶರಣ ವಿಚಾರಧಾರೆ ಅನುಷ್ಠಾನಗೊಳಿಸಿದಲ್ಲಿ ಸಂತೃಪ್ತ ಜೀವನ ಸಾಗಿಸಲು ಸಾಧ್ಯ ಎಂದರು.
ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಜಿ. ಪ್ರಕಾಶ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣ ಸಾಹಿತ್ಯ ಜೀವನದ ನಡವಳಿಕೆಯಿಂದ ಸಮಗ್ರ ಬದಲಾವಣೆ ಸಾಧ್ಯ. ಭ್ರಷ್ಟಾಚಾರ, ಜಾತೀಯತೆ, ಭಯೋತ್ಪಾದನೆ, ಬಡತನ, ಅಜ್ಞಾನಗಳ ತೊಲಗಿಸಲು ಆಡಳಿತದಲ್ಲಿ ಶರಣ ಚಿಂತನೆ ಅಳವಡಿಕೆ ಅಗತ್ಯ ಎಂದರು.
ಈಚೆಗೆ ಸೇಡಂ ಕೊಡೇಕಲ್ಲ ಚನ್ನಬಸವಣ್ಣ ಪ್ರಕಾಶನವು ಕಂಪ್ಲಿಯ ಲೇಖಕ ಬಂಗಿ ದೊಡ್ಡ ಮಂಜುನಾಥರ ‘ಬೆಂಕಿಯ ಶೀತ’ ಕಾದಂಬರಿಗೆ ‘ಕಂದ’ ಪ್ರಶಸ್ತಿ ನೀಡಿದ್ದಕ್ಕಾಗಿ ಲೇಖಕರನ್ನು ಗೌರವಿಸಲಾಯಿತು.
ಶಸಾಪ ಪದಾಧಿಕಾರಿಗಳಾದ ಎಸ್.ಡಿ.ಬಸವರಾಜ, ಸಂತೋಷ ಸೋಗಿ, ಅಶೋಕ ಕುಕನೂರ, ಎಲಿಗಾರ ವೆಂಕಟರೆಡ್ಡಿ, ಸಜ್ಜೇದ ವೀರಭದ್ರಪ್ಪ, ಬಿ.ಎಂ.ರುದ್ರಯ್ಯ, ಎಸ್.ಶಾಮಸುಂದರರಾವ್, ಮಡಿವಾಳ ಹುಲುಗಪ್ಪ, ಮಾ.ಶ್ರೀನಿವಾಸ, ಕೆ.ಯಂಕಾರೆಡ್ಡಿ, ಬಸವರಾಜ ಸೇರಿ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















