ಬಳ್ಳಾರಿ / ಕಂಪ್ಲಿ : ಶರಣ, ಸಂತರ ಪುರಾಣ ಪ್ರವಚನಗಳನ್ನು ಆಲಿಸಿದಾಗ ಪ್ರತಿಯೊಬ್ಬರ ಜೀವನದಲ್ಲಿ ನೆಮ್ಮದಿ, ಸಹಬಾಳ್ವೆ ನೆಲೆಸಲು ಸಾಧ್ಯ ಎಂದು ಬುಕ್ಕಸಾಗರದ ಕರಿಸಿದ್ದೇಶ್ವರ ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಸಣಾಪುರ ಗ್ರಾಮದ ಉದ್ಭವ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ವೀರಭದ್ರೇಶ್ವರ ಮಹಾ ರಥೋತ್ಸವ ಹಾಗೂ 49ನೇ ವರ್ಷದ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನದ ಮಂಗಲೋತ್ಸವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳ ಪರಿಪಾಲನೆ ಜೊತೆಗೆ ಆಧ್ಯಾತ್ಮಿಕ ಚಿಂತನೆಯೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು. ನಾಡಿನುದ್ದಕ್ಕೂ ಶರಣಬಸವೇಶ್ವರ ಹಾಗೂ ಇಲ್ಲಿನ ಉದ್ಭವ ವೀರಭದ್ರೇಶ್ವರ ದೇವರ ಪವಾಡ ಅದ್ಬುತವಾಗಿದೆ. ಮನುಷ್ಯನ ಆಧುನಿಕ ಯುಗದಲ್ಲಿ ಸಂಸಾರದ ಜಂಜಾಟದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ನೆಮ್ಮದಿ ಜೀವನಕ್ಕಾಗಿ ಇಂತಹ ಶರಣರ ಪುರಾಣ ಪ್ರವಚನಗಳನ್ನು ಆಲಿಸಬೇಕು ಎಂದರು.
ವೀರಭದ್ರೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ವೀರಭದ್ರೇಶ್ವರ ಮಹಾರಥೋತ್ಸವ ಪ್ರಯುಕ್ತ ಸತತ 49 ವರ್ಷಗಳಿಂದ ಶರಣಬಸವೇಶ್ವರ ಪುರಾಣ ಪ್ರವಚನ ಪ್ರತಿಯೊಬ್ಬರ ಸಹಾಯ, ಸಹಕಾರದಿಂದ ಮಾಡಿಕೊಂಡು ಬರಲಾಗಿದೆ. ಶರಣ, ಸಂತರದ ಆಶೀರ್ವಾದದಿಂದ ಭಕ್ತರೆಲ್ಲರೂ ಒಳ್ಳೆಯ ಜೀವನ ನಡೆಸುವಂತಾಗಿದೆ ಎಂದರು.
ಹೆಬ್ಬಾಳ ರೇಣುಕಾಶ್ರಮದ ಪ್ರಕಾಶ ಸ್ವಾಮಿ ಇವರು ಆರ್ಶಿವದಿಸಿ ಮಾತನಾಡಿದರು. ನಂತರ ಲಿಲಾವು ಮಾಡಲಾಯಿತು. ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ಕಳೆದ ಒಂದು ತಿಂಗಳು ನಡೆದ ಪುರಾಣ ಪ್ರವಚನದಲ್ಲಿ ಬಸಯ್ಯ ಶಾಸ್ತ್ರಿ, ಇವರು ಪುರಾಣ ಪ್ರವಚನ ನಡೆಸಿಕೊಟ್ಟರು. ಹೆಚ್.ಎಮ್.ಶಂಕ್ರಯ್ಯಸ್ವಾಮಿ ಪುರಾಣ ಪಠಣ ಮಾಡಿದರು.
ಆಚಾರ್ಯ ಗಣೇಶಸ್ವಾಮಿ ತಬಲಾವಾದಕರಾಗಿ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಸ್ಥಳೀಯ, ತಾಲೂಕು, ಜಿಲ್ಲೆಯ ಮುಖಂಡರು, ಮಹಿಳೆಯರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. ಸಂಜೆ ಉದ್ಭವ ವೀರಭದ್ರೇಶ್ವರ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಫೆ.27ರಂದು ಗ್ರಾಮದಲ್ಲಿ ಕಡುಬಿನ ಕಾಳಗ ಹಾಗೂ ಮಹಿಳೆಯರಿಂದ ಹಾಡುಗಾರಿಕೆ ಮತ್ತು ಬಾಣ ಸುಡುವ ಕಾರ್ಯಕ್ರಮ ಜರುಗಲಿದೆ.
ವರದಿ : ಜಿಲಾನಸಾಬ್ ಬಡಿಗೇರ್




















