ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ ನಾಲ್ಕು ಹೆಣ್ಣು ಮಕ್ಕಳ ಜೊತೆಗಿನ ನಮ್ಮ ಸಂಬಂಧಗಳು. ಈ ಸಂಬಂಧದ ಹೊರತಾಗಿ ಆಕೆ ಓರ್ವ ಸ್ನೇಹಿತೆಯೂ ಆಗಬಹುದು. ಒಂದು ಹಂತದವರೆಗೆ ಆಕೆಯೊಂದಿಗೆ ನಮ್ಮ ಮನ ಬಿಚ್ಚಿ ನಾವು ಮಾತನಾಡಲು ಸಾಧ್ಯವಾಗುತ್ತದೆ.
ಅವರವರು ಕಂಡುಕೊಂಡಂತೆ ಹೆಣ್ಣನ್ನು ಎಲ್ಲರೂ ವರ್ಣಿಸುತ್ತಾರೆ ಹೊರತು ಆಕೆಯ ನಿಜವಾದ ಅಸಲಿಯತ್ತು ಯಾರಿಗೂ ಗೊತ್ತಿಲ್ಲ… ಕೆಲವರಿಗೆ ಹೆಣ್ಣು ಮಾಯೆಯಾದರೆ ಮತ್ತೆ ಕೆಲವರಿಗೆ ಆಕೆ ಮೋಹಿನಿ ಮತ್ತೆ ಕೆಲವರಿಗೆ ಆಕೆ ದೇವತಾ ಸ್ವರೂಪಿಣಿ ಮತ್ತೆ ಕೆಲವರಿಗೆ ಆಕೆ ಜಾರಿಣಿಯು ಆಗಬಹುದು, ಇನ್ನು ಕೆಲವರಿಗೆ ಆಕೆಯ ರಕ್ಕಸಿಯು ಆಗಬಹುದು… ಅವರವರ ಭಾವಕ್ಕೆ ತಕ್ಕಂತೆ ಅವರು ಹೆಣ್ಣಿನ ಕುರಿತು ಮಾತನಾಡುತ್ತಾರೆಯೇ ಹೊರತು ಖುದ್ದು ಆಕೆ ಯಾರೆಂದು ಅವರಿಗೆ ಗೊತ್ತಿರುವುದಿಲ್ಲ.
ಆಕೆ ಯಾರ ಅಂಕೆಗೂ ನಿಲುಕುದ ಸೀಮಾತೀತಳು. ಯಾವ ಉಪಮೆಗೆ ನಿಲುಕದ ಉಪಮಾತೀತಳು.
ಹೆಣ್ಣು ಮೌನದಲ್ಲೇ ಸಾವಿರ ಮಾತುಗಳನ್ನು ಹೊತ್ತು ನಡೆಯುವ ಛಾತಿಯುಳ್ಳವಳು.
ತನ್ನ ಕರ್ತವ್ಯಕ್ಕೆ ಬದ್ಧಳಾಗಿ ತನ್ನನ್ನು ನಂಬಿದವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪೊರೆಯುವವಳು.
ಯಾರಿಗೂ ಕೇಡನ್ನು ಬಯಸದ ಆಕೆ ಜನರು ತನ್ನನ್ನು ಕೈಬಿಟ್ಟರೂ ದೇವರು ತನ್ನೊಂದಿಗೆ ಇದ್ದಾನೆ ಎಂಬ ನಂಬಿಕೆಯ ಬಲದಿಂದಲೇ ಬದುಕನ್ನು ನಡೆಸುತ್ತಾಳೆ. ಆಕೆಯ ಪ್ರಕಾರ ಬದುಕು ಪ್ರದರ್ಶನವಲ್ಲ ಅದೊಂದು ಪ್ರಯಾಣ… ಈ ಪ್ರಯಾಣದಲ್ಲಿ ಹೆತ್ತವರು, ಶಿಕ್ಷಕರು ಸಂಗಾತಿ ಮಕ್ಕಳು ಎಲ್ಲವೂ ಆಯಾ ಸಮಯಕ್ಕೆ ಆಕೆಯ ಜೊತೆಗೆ ಸಾಗುತ್ತದೆ ಇದೊಂದು ರೀತಿಯಲ್ಲಿ ಬದುಕಿನ ಪ್ರತಿಯೊಂದು ಕ್ಷಣವನ್ನು ಉಸಿರಾಡುವ ಆನಂದಿಸುವ ಪ್ರಭುದ್ಧತೆಯ ಹಾದಿಯಲ್ಲಿ ಸಾಗಿ ಹೋಗುವ ಪಯಣ.
ಇನ್ನೂ ಹೇಳಬೇಕೆಂದರೆ ಆಕೆ ಜೀವನದ ಅರ್ಥ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ ಬದಲಾಗಿ ತನ್ನ ಮನದ ಆಳದ ಕತ್ತಲೆಯನ್ನು ಆಕೆ ತಳ್ಳಿ ಹಾಕದೆ ಮರೆ ಮಾಡದೆ ಆ ಕತ್ತಲೆಯ ಒಳಗಿರುವ ಬೆಳಕಿನತ್ತ ಮುಖ ಮಾಡುತ್ತಾಳೆ.
ಆಕೆಗೆ ಗೊತ್ತು ಆಕೆ ನಡೆಯುತ್ತಿರುವ ಹಾದಿಯಲ್ಲಿ ಆತ್ಮ ವಿಶ್ವಾಸ ಹಾಗೂ ನಿಶಬ್ದ ಶಕ್ತಿ ಮಾತ್ರ ಆಕೆಯೊಂದಿಗೆ ಇರುತ್ತದೆ ಎಂದು.
ಆಕೆ ಪ್ರತಿಭಟನೆಯನ್ನು ಒಂದು ಪಾಠವಾಗಿ ಸ್ವೀಕರಿಸುತ್ತಾಳೆ ಪ್ರತಿ ತಪ್ಪು ಹೆಜ್ಜೆಯನ್ನು ಅನುಭವದ ಬೆಳಕಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ತನ್ನ ಅಂತರಾಳದಲ್ಲಿ ಮತ್ತಷ್ಟು ದೃಢವಾಗಿ ರೂಪುಗೊಳ್ಳುತ್ತಾಳೆ.
ಮನೆಯ ಪ್ರತಿಯೊಬ್ಬರ ಆಗುಹೋಗುಗಳನ್ನು ಅನುಸರಿಸಿ ಅದಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಆಕೆ ಒಂದೊಮ್ಮೆ ನಿಜವಾಗಿಯೂ ತನ್ನದೇ ಆದ ಬದುಕನ್ನು ನಡೆಸಬೇಕು ಎಂದು ಇಚ್ಛಿಸಿದರೆ ಖಂಡಿತವಾಗಿಯೂ ಈ ಜೀವ ಜಗತ್ತಿನ ಉಳಿದ ಜೀವಿಗಳು ತಲ್ಲಣಗೊಳ್ಳುತ್ತವೆ ಕಾರಣ ಎಲ್ಲರ ಜೀವನದ ದೈನಂದಿನ ಚಟುವಟಿಕೆಗಳ ಕೇಂದ್ರ ಬಿಂದು ಆಕೆಯೇ. ಇವರೆಲ್ಲರ ಚಟುವಟಿಕೆಗಳಿಗೆ ಪೂರಕವಾಗಿ ತನ್ನ ಇಡೀ ಬದುಕನ್ನು ಮುಡಿಪಾಗಿರುವ ಆಕೆಯ ಪಾಲಿಗೆ ಬದುಕು ಎಂದರೆ ಗಮ್ಯ ಸ್ಥಾನಕ್ಕೆ ಓಡುವ ಓಟವಲ್ಲ ಬದಲಾಗಿ ತಾನಿಡುವ ಪ್ರತಿ ಹೆಜ್ಜೆಯಲ್ಲೂ ಅರ್ಥವನ್ನು ಕಂಡುಕೊಳ್ಳುವ ಪಯಣ. ಆಕೆಯ ಅನುಭವಗಳೇ ಆಕೆಯನ್ನು ಇಂದಿನ ವ್ಯಕ್ತಿಯಾಗಿ ರೂಪಿಸುತ್ತದೆ.
ಒಂದೊಮ್ಮೆ ಆಕೆಯನ್ನು ದುರ್ಬಲಗೊಳಿಸಿದ ಘಟನೆಗಳು ಇಂದು ಆಕೆಯನ್ನು ಗಟ್ಟಿಗೊಳಿಸಿರುತ್ತವೆ. ಪ್ರತಿ ಘಟನೆಗೂ ಒಂದು ಅರ್ಥವಿದೆ ಎಂಬ ನಂಬಿಕೆಯಿಂದ ಬದುಕುವ ಆಕೆ ಜೀವನದ ನಿಜವಾದ ಗೆಲುವು ಇತರರನ್ನು ಮೀರಿಸುವುದಲ್ಲ ಬದಲಾಗಿ ತನ್ನ ಅಂತರಂಗದ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರಿವನ್ನು
ಹೊಂದಿರುತ್ತಾಳೆ ಅಂತೆಯೇ ಆಕೆ ಎಲ್ಲರನ್ನು ಕ್ಷಮಿಸಬಲ್ಲಳು ಕೂಡಾ.
ಬದುಕಿನ ಪಯಣದಲ್ಲಿ ವಯೋ ಸಹಜವಾಗಿ ಕೆಲವೊಮ್ಮೆ ಆಕೆಯ ನಡಿಗೆ ನಿಧಾನವಾಗಬಹುದು… ಆದರೆ ನಂಬಿಕೆ ಆಕೆಯನ್ನು ಮುನ್ನಡೆಸುತ್ತದೆ.
ಇಷ್ಟೆಲ್ಲಾ ಇದ್ದರೂ ಕೂಡ ಒಮ್ಮೊಮ್ಮೆ ಹೆಣ್ಣು ಮಕ್ಕಳು ಮಾನಸಿಕವಾಗಿ ನೊಂದು ಬೇಯುತ್ತಾರೆ. ಅಸ್ತಿತ್ವ ರಹಿತತೆಯನ್ನು ಅನುಭವಿಸುತ್ತಾರೆ. ಕಳೆದು ಹೋದವರಂತೆ ಭಾವಿಸುತ್ತಾರೆ. ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂಬ ಭಾವದಿಂದ ಹತಾಶೆಯನ್ನು ಹೊಂದುತ್ತಾರೆ.
ಅಂತಹ ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು
ಕನ್ನಡಿಯ ಮುಂದೆ ನಿಂತು ತನ್ನ ಬಿಂಬವನ್ನೇ ಪರಿಭಾವಿಸುವುದರಿಂದ ಆತ್ಮ ಸಾಕ್ಷಾತ್ಕಾರ ಇಲ್ಲವೇ ಸ್ವಂತಿಕೆ ಒದಗಿ ಬರುವುದಿಲ್ಲ. ನಾನು ಎಲ್ಲವನ್ನೂ ಪಡೆದುಕೊಂಡಿದ್ದೇನೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ ಹಾಗೆ ಪಡೆದುಕೊಂಡವರು ಅದನ್ನು ವಿವರಿಸಲು ಕೂಡ ಸಾಧ್ಯವಿಲ್ಲ ಎಲ್ಲವೂ ಅವರವರ ದೃಷ್ಟಿಕೋನದ ಮೇಲೆ ನಿರ್ಧಾರವಾಗಿರುತ್ತದೆ… ಆದರೆ ಶಿಕ್ಷಣ ಮತ್ತು ಸಮಾಜದ ಕೆಲಸಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ಹೆಂಗಸರು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಲು ಮುಂದಾಗದಿದ್ದರೆ ತಮ್ಮ ಮಾನವೀಯ ನೆಲೆಗಳನ್ನು ಕಳೆದುಕೊಳ್ಳುತ್ತಾರೆ.
ಪ್ರಸ್ತುತ ಬದುಕಿನಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತು ಗುರಿಗಳಿಲ್ಲ ಆಸೆ ಆಕಾಂಕ್ಷೆಗಳಿಲ್ಲ ನಾಳೆಗಾಗಿ ಹಂಬಲಿಸುವುದಿಲ್ಲ ತನ್ನ ದೇಹ ಸಮರ್ಥವಾಗಿರುವ ಹೊತ್ತಿನಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂಬ ಛಲವಿಲ್ಲ ಇದೊಂದು ರೀತಿಯ ಆತ್ಮಹತ್ಯೆಯೇ ಸರಿ. ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ಶಾಲೆಗೆ ಕಳುಹಿಸಿದ ಹೊತ್ತಿನಲ್ಲಿ ಸುಮ್ಮನೆ ಕುಳಿತುಕೊಂಡ ಹೆಣ್ಣು ಮಕ್ಕಳು ತಮಗೆ ತಾವೇ ಮಿತಿಗಳನ್ನು ಹಾಕಿಕೊಂಡು ತಮ್ಮ ಅನನ್ಯ ಸಾಮರ್ಥ್ಯಗಳ ಅರಿವನ್ನು ಕಳೆದುಕೊಂಡು ಬಿಡುತ್ತಾರೆ.
ಕೇವಲ ಎರಡು ದಶಕಗಳ ಹಿಂದೆ ಗೃಹಿಣಿಯರನ್ನು ಸಂದರ್ಶಿಸಿದ ಮಾಧ್ಯಮ ಒಂದು ಹೆಂಗಸಾಗಿ ಕೆಲಸ ಮಾಡುವಾಗ ನೀವು ಏನೆಲ್ಲಾ ತಳಮಳವನ್ನು ಎದುರಿಸಿದಿರಿ?
ನಿಮ್ಮ ಹಿಂದಿನ ಬದುಕಿನಲ್ಲಿ ಮುಖ್ಯ ಸಂತೃಪ್ತಿ ಮತ್ತು ಮುಖ್ಯ ತಳಮಳ ಯಾವುದು?
ನಿಮ್ಮೊಳಗೆ ನೀವು ಹೇಗೆ ಬದಲಾಗಿದ್ದೀರಿ ವಯಸ್ಸಾಗುವುದನ್ನು ನೀವು ಹೀಗೆ ಗ್ರಹಿಸುತ್ತಿದ್ದೀರಿ ಹಾಗೂ ಇದಕ್ಕಿಂತ ಭಿನ್ನವಾಗಿ ಬೇರೇನು ಮಾಡಬೇಕೆಂಬ ಆಸೆ ನಿಮ್ಮಲ್ಲಿತ್ತು ಎಂಬ ಪ್ರಶ್ನೆಗಳನ್ನು ಕೇಳಿದಾಗ ಅವರ ನಿಜ ಸಮಸ್ಯೆಗಳಿಗೆ ಶಿಕ್ಷಣ ಕಾರಣವಲ್ಲ ಎಂಬುದು ಸ್ಪಷ್ಟವಾಯಿತು ಅವರೆಲ್ಲರೂ ಶಿಕ್ಷಣವನ್ನು ತಾವು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಅದನ್ನು ಬಳಸಲು ತಕ್ಕ ಯೋಜನೆ ಮಾಡಿಕೊಳ್ಳಲಿಲ್ಲ ಎಂದು ಬೇಸರದಿಂದ ನುಡಿದಿದ್ದರು.
ಮದುವೆಯಾದವರಲ್ಲಿ ಬೆರಳೆಣಿಕೆಯ ಜನರು ವಿಚ್ಛೇದಿತರಾಗಿದ್ದರೂ ಮತ್ತೆ ಶೇಕಡಾ ೯0 ಜನ ಮಕ್ಕಳಿಗೆ ತಾಯಿಯಾಗಿದ್ದರು ಮತ್ತೆ ಕೆಲವರು ತಮಗೂ ಗೃಹಿಣಿ ಎಂದು ಹೇಳಿಕೊಳ್ಳಲು ಸಂತಸವೇನೂ ಇಲ್ಲ ಎಂಬ ಭಾವವನ್ನು ಹೊಂದಿದ್ದರು.
ಇನ್ನೂ ಕೆಲವರಿಗೆ ತಾವು ಪಡೆದ ಶಿಕ್ಷಣ ತಮ್ಮೊಳಗಿನ ತಳಮಳಕ್ಕೆ ಕಾರಣ ಎಂದು ಅರಿವಾಗಿತ್ತು. ತಮಗೆ ಶಿಕ್ಷಣ ಒದಗಿಸಿದ್ದ ಸ್ವಾಯತ್ತತೆ, ಗುರಿ, ಮೌಲ್ಯ ಹಾಗೂ ಬದ್ಧತೆಗಳನ್ನು ತಾವು ಬಳಸಿಕೊಂಡಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು.
ಮುಂದೆ ಕೆಲವು ವರ್ಷಗಳ ನಂತರ ಅವರನ್ನು ಈ ಕುರಿತು ಮತ್ತೊಮ್ಮೆ ಪ್ರಶ್ನೆಸಿದಾಗ ಕೆಲವರ ಮನಸ್ಸಿನಲ್ಲಿ ಗೃಹಿಣಿಯರಾಗಿದ್ದ ಕಾರಣ ಕಹಿ ಭಾವನೆ ಇಲ್ಲವೇ ನಿರಾಸೆ ಮತ್ತು ಹತಾಶೆಗಳು ಮನೆ ಮಾಡಿದ್ದವು.
ಮತ್ತೆ ಕೆಲವರು ಉದ್ಯೋಗ ಮತ್ತು ತಾಯ್ತನಗಳನ್ನು ಒಗ್ಗೂಡಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದರು .
ಇನ್ನೂ ಕೆಲವರು ನಾನ್ಯಾರು ಎಂಬುದೇ ನನಗೆ ಇನ್ನೂ ಅರ್ಥವಾಗಿಲ್ಲ ನನ್ನದೇ ಆದ ಸೃಜನಶೀಲ ಜೀವನವನ್ನು ಕಟ್ಟಲು ತಕ್ಕ ಯೋಚನೆ ಮಾಡಬೇಕಿತ್ತು ಎಂದು ಈಗ ಅನಿಸುತ್ತಿದೆ ಎಂದು ಬೇಸರ ಪಟ್ಟುಕೊಂಡರು.
ಜೀವನಪೂರ್ತಿ ಅವರಿವರ ಕೆಲಸಗಳನ್ನು ಮಾಡುತ್ತಾ ತಮ್ಮನ್ನು ತಾವು ಕಡೆಗಣಿಸಿದ ಪರಿಣಾಮವಾಗಿ ಮಾನಸಿಕವಾಗಿ ಕುಸಿದು ಹೋಗುತ್ತಾ, ಕೀಳರಿಮೆಯಿಂದ ಬಳಲುತ್ತಾ ಹೆಣ್ಣುತನ ಎಂಬ ಕಣ್ಕಟ್ಟಿನಿಂದ ತಮ್ಮಂತಹ
ಹೆಣ್ಣು ಮಕ್ಕಳು ಬದುಕಿನ ಕುರಿತು ನೂರೆಂಟು ತೊಂದರೆಗಳನ್ನು, ನೋವುಗಳನ್ನು, ನಕಾರಾತ್ಮಕ ಭಾವಗಳನ್ನು ವ್ಯಕ್ತ ಪಡಿಸುತ್ತಾರೆ.
ಗಂಡ ಮನೆ ಮತ್ತು ಮಕ್ಕಳಿಗೆ ಮಾಡಿ ಮಾಡಿ ನಾನು ನನ್ನ ಬದುಕನ್ನೇ ಸವೆಸಿದೆ ಎಂದು ಹೇಳುತ್ತಾರೆ ಮಾಡಿದ ಮನೆ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುತ್ತಾ ಇನ್ನಷ್ಟು ಮತ್ತಷ್ಟು ಉಜ್ಜುತ್ತಾ ಕಾಲ ಕಳೆದಿರುತ್ತಾಳೆ.
ಅದರ ಬದಲಾಗಿ ಮನೆವಾರ್ತೆಯೇ ತಮ್ಮ ಉದ್ಯೋಗ ಎಂದು ನಂಬುವುದನ್ನು ನಿಲ್ಲಿಸಿ ತಮ್ಮ ಮನೆ ವಾರ್ತೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು.. ಮನೆ ಮಕ್ಕಳು ಕುಟುಂಬದ ಹೊರತಾಗಿಯೂ ತಮಗೆ ಒಂದು ಬದುಕಿದೆ ಎಂಬ ಅರಿವನ್ನು ಮೂಡಿಸಿಕೊಂಡು ಹಾಡು ಹೊಲಿಗೆ ಹಸೆ, ಕಂಪ್ಯೂಟರ್ ಕಲಿಕೆ ಚಿತ್ರಕಲೆ ಸಂಗೀತ ಸೌಂದರ್ಯ ವರ್ಧನ ಚಿಕಿತ್ಸೆಗಳು ಹೀಗೆ ಹತ್ತು ಹಲವು ಕಲಿಕೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮ ಬದುಕಿನಲ್ಲಿ ತಮಗಾಗಿ ತಾವೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡು ಆ ಸ್ಥಾನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ರೀತಿನಲ್ಲಿ ಕಾರ್ಯ ನಿರ್ವಹಿಸಿದ ಹೆಣ್ಣು ಮಕ್ಕಳು ಬದುಕಿನಲ್ಲಿ ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡಬಹುದು.
ಪ್ರತಿ ಹೆಣ್ಣು ಮಗಳು ಕೂಡ ತಾನು ಕೇವಲ ಮಗಳು ಪತ್ನಿ ತಾಯಿ ಮಾತ್ರವಲ್ಲ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಓರ್ವ ಹೆಣ್ಣುಮಗಳು ಸಮಾಜ ರಚನೆಯ ಭಾಗ ತಾನು ಎಂದು ಅರಿತುಕೊಳ್ಳಬೇಕು.
ಪ್ರಸ್ತುತ ವ್ಯವಸ್ಥೆಯು ಹೆಣ್ಣು ಮಕ್ಕಳಿಗೆ ಒಂದು ಹೊರೆ ಎಂಬಂತಾದರೆ ಅದರಿಂದ ಹೊರಬರಲು ಉದ್ಯೋಗವನ್ನು ಜೀವನ ಯೋಜನೆಯ ಭಾಗವಾಗಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಮನೋರಂಜನೆಯ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾತಂತ್ರ್ಯ, ಸಾಮರ್ಥ್ಯ ಮತ್ತು ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬಹುದು.
ಕೆಲವು ಹೆಣ್ಣು ಮಕ್ಕಳು ಉದ್ಯೋಗಗಳನ್ನು ಪಡೆದುಕೊಂಡರೂ ಅದಕ್ಕೆ ತಕ್ಕ ಹೊಸ ಜೀವನ ಯೋಜನೆಯನ್ನು ರೂಪಿಸುವುದಿಲ್ಲ. ಉದ್ಯೋಗಗಳು ತಮ್ಮ ಭವಿಷ್ಯದ ಬಾಗಿಲನ್ನು ತೆರೆದು ತನ್ನ ಉದ್ಯೋಗದ ಗಳಿಗೆ ಕುಟುಂಬದ ವೆಚ್ಚಕ್ಕೆ ನೆರವಾದಾಗ ಮಾತ್ರ ತಾನು ದುಡಿದದ್ದು ಸಾರ್ಥಕ ಎಂಬುದು ಹೆಣ್ಣು ಮಕ್ಕಳ ಮನಸ್ಥಿತಿ. ಯಾವುದೇ ವೃತ್ತಿ ಬಯಸುವ ಬದ್ಧತೆಗೆ ಬೇಕಾದ ಶಿಸ್ತು ಮತ್ತು ಪ್ರಯತ್ನಗಳನ್ನು ನೀಡಬಯಸುವ ಹೆಣ್ಣು ಮಕ್ಕಳು ಹೆಣ್ಣುತನ ಎಂಬ ಕಣ್ಕಟ್ಟನ್ನು ದೂರವಿರಿಸಬೇಕು.. ಆ ಹೆಣ್ಣುತನ ಎಂಬ ಕಣ್ಕಟ್ಟು ಆಕೆಯಲ್ಲಿ ಭಯವನ್ನು ಬಿತ್ತಬಹುದು ಪೂರ್ವಾಗ್ರಹಗಳನ್ನು ಹೇರಬಹುದು ಆಕೆಯಲ್ಲಿ ಹಿಂಜರಿಕೆಯನ್ನು ಉಂಟುಮಾಡಬಹುದು ಧಾರ್ಮಿಕ ಸಾಂಪ್ರದಾಯಿಕತೆಯ ಮುಖವಾಡ ಧರಿಸಿ ಪ್ರತಿರೋಧಗಳನ್ನು ಒಡ್ಡಬಹುದು.
ಸಂಪ್ರದಾಯಬದ್ಧರಲ್ಲದ ಹೆಣ್ಣು ಮಕ್ಕಳಿಗೂ ಕೂಡ ಮನೆ ಬಿಟ್ಟು ದುಡಿಯಲು ಹೋಗುವುದೆಂದರೆ, ಗಂಡ ಮಕ್ಕಳನ್ನು ಕಡೆಗಣಿಸಿದಂತೆ ಎಂಬ ಭಾವ ಇರುತ್ತದೆ. ಒಂದು ವೇಳೆ ಮಗುವಿಗೆ ಅನಾರೋಗ್ಯವಾದರೆ, ಗಂಡನಿಗೆ ಆತನದ್ದೆ ಆದ ಸಮಸ್ಯೆಗಳು ಎದುರಾದರೆ ಸಮುದಾಯದಲ್ಲಿ ಆಕೆ ಗಂಡನನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂಬ ಭಾವ ಮೂಡುವಂತೆ ಮಾಡುವ ಈ ಕಣ್ಕಟ್ಟು ಆಕೆಯ ಬೆಳವಣಿಗೆಗೆ ಅಡ್ಡಿ ಆತಂಕವನ್ನು ಉಂಟುಮಾಡುತ್ತದೆ ಎಂಬ ಅರಿವನ್ನು ಹೊಂದಿದ್ದರು.
ನಿಜ ಹೆಣ್ಣು ಮಕ್ಕಳು ಹೋರಾಡಲು ಕಲಿಯಬೇಕು ಹೆಂಗಸಿನಂತೆ ಅಲ್ಲ ಬದಲಾಗಿ ಓರ್ವ ಮನುಷ್ಯಳಂತೆ. ಹೆಂಗಸರು ಅಂತಿಮವಾಗಿ ತಾವೇ ತಾವಾಗಿದ್ದಾಗ ಏನಾಗಿರುತ್ತಾರೆ ಎಂಬುದನ್ನು ಯಾರು ಬಲ್ಲರು?
ಪ್ರೀತಿಯ ಒತ್ತಾಸೆಯನ್ನು ಕಳೆದುಕೊಳ್ಳದೆ ಅವರ ಬುದ್ಧಿವಂತಿಕೆಯು ಪೋಷಣೆ ಪಡೆದಾಗ ಅದು ಏನೆಲ್ಲಾ ಸಾಧನೆಗಳನ್ನು ಮಾಡುತ್ತದೆ ಎಂಬುದನ್ನು ಅರಿತವರಾರು?
ಹೆಣ್ಣು ಮಕ್ಕಳ ಬದುಕು ಬದಲಾಗುತ್ತಿದೆ ಆಕೆ ತನ್ನನ್ನು ತಾನು ಅರಿತಂತೆ ಆಕೆಯಲ್ಲಿನ ಸಾಮರ್ಥ್ಯ ಒತ್ತಾಸೆ ಪ್ರೀತಿಗಳು ವೃದ್ಧಿಗೊಳ್ಳುತ್ತಿವೆ. ಆಕೆ ತನ್ನನ್ನು ಪ್ರೀತಿಸಿದಷ್ಟೇ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತಿದೆ. ತನ್ನ ಕೆಲಸವನ್ನು ಹೆಂಗಸಾಗಿ ಆಕೆ ಅನುಭವಿಸುತ್ತಿದ್ದಂತೆಯೇ ಅದರ ಅನುಭವದ ಆಧಾರದ ಮೇಲೆ ಇತರರಿಗೆ ಮಾದರಿಯಾಗುತ್ತಿದ್ದಾಳೆ.
ಏನಂತೀರಾ ಸ್ನೇಹಿತರೇ ?
- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ.



















