ಬಳ್ಳಾರಿ / ಕಂಪ್ಲಿ : ಸಕ್ಕರೆ ಕಾರ್ಖಾನೆಯ ಸ.ಹಿ.ಪ್ರಾ ಶಾಲಾ ಆವರಣದಲ್ಲಿ ಮೌಲಾನಾ ಆಜಾದ್ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಕೂಡಲೇ ಈ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ, ಕಂಪ್ಲಿಯ ಸಕ್ಕರೆ ಕಾರ್ಖಾನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಮಲಿಂಗ ನೇತೃತ್ವದಲ್ಲಿ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಕುರುಗೋಡು ಪಟ್ಟಣದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮ್ಯಾನೇಜರ್ ಭುಜಂಗಯ್ಯ ಮಠ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಯುವ ಮುಖಂಡ ಎನ್.ಮನೋಜಗೌಡ ಮಾತನಾಡಿ, ಇಲ್ಲಿನ ಶಾಲೆಯು ಹಳೆಯದಾಗಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳು ಇಲ್ಲಿನ ಶಾಲೆಯಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಮತ್ತು ಈಗ ಸಾಕಷ್ಟು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ ನೀಡಲಾಗುತ್ತಿದೆ. ಇಲ್ಲಿನ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಆಟದ ಮೈದಾನ ಹೊಂದಲಾಗಿದೆ. ಪಿಎಂಶ್ರೀ ಯೋಜನೆಗೆ ಒಳಪಟ್ಟಿದ್ದು, ಆತ್ಯಾಧುನಿಕ, ಮಾದರಿ ಶಾಲೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಆವರಣದಲ್ಲಿ ಮೌಲಾನಾ ಆಜಾದ್ ಶಾಲೆ ನಿರ್ಮಿಸಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸುಂಕಣ್ಣ, ಪ್ರಕಾಶ, ರ್ರಿಸ್ವಾಮಿ, ಆದಿನಾರಾಯಣ, ಓಬಳೇಶ, ಕಾರ್ತಿಕ ಸೇರಿದಂತೆ ಹಳೇ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಯವರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















