ಹನೂರು: “12ನೇ ಶತಮಾನದಲ್ಲಿ ಜಗಜ್ಯೋತಿ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದ ಮೂಲಕ ಜಗತ್ತಿಗೆ ಸಮಾನತೆ, ಸಹೋದರತೆ ಮತ್ತು ಕಾಯಕ ನಿಷ್ಠೆಯ ಆದರ್ಶಗಳನ್ನು ಸಾರಿದ್ದಾರೆ. ಅಂತಹ ಮಹಾನ್ ದಾರ್ಶನಿಕರ ತತ್ವಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ, ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ಸಲ್ಲಿಸಲು ಸಾಧ್ಯ,” ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹದಲ್ಲಿ ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ ಆರ್ ಮಂಜುನಾಥ್.
ಸ್ವಾರ್ಥ ಬಿಡಿ, ಕಾಯಕ ನಂಬಿ: ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವು ನಂತರ ಅದನ್ನು ಮರೆಯುತ್ತಿದ್ದೇವೆ. ಸ್ವಾರ್ಥ ಮತ್ತು ‘ನಾನು’ ಎಂಬ ಅಹಂಭಾವವನ್ನು ಬಿಟ್ಟು, ‘ಕಾಯಕವೇ ಕೈಲಾಸ’ ಎಂಬ ತತ್ವದಡಿ ನಡೆದರೆ ಸಮಾಜ ಸುಧಾರಣೆ ಸಾಧ್ಯ.
ಮುಂದಿನ ಪೀಳಿಗೆಗೆ ಮಾದರಿಯಾಗಿ: ಇಂದು ನಾವು ಮಾಡುವ ಕೆಲಸಗಳನ್ನು ನಮ್ಮ ಮಕ್ಕಳು ಅನುಸರಿಸುತ್ತಾರೆ. ಹಾಗಾಗಿ ಪೋಷಕರು ಮತ್ತು ಹಿರಿಯರು ಮಹನೀಯರ ತತ್ವಗಳನ್ನು ಪಾಲಿಸುವ ಮೂಲಕ ಮುಂದಿನ ಪೀಳಿಗೆಗೆ ಮಾದರಿಯಾಗಬೇಕು.
ಪ್ರತಿಮೆ ನಿರ್ಮಾಣಕ್ಕೆ ಭರವಸೆ: ಪಟ್ಟಣದಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಕಾಲಾವಕಾಶ ನೀಡುವಂತೆ ಕೋರಿದ ಶಾಸಕರು, ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
“ಮಹನೀಯರ ಜಯಂತಿಗಳು ಒಂದು ದಿನದ ಆಚರಣೆಯಾಗಬಾರದು. ಅವರ ಸಿದ್ದಾಂತಗಳು ನಮ್ಮ ಬದುಕಿನ ಭಾಗವಾದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.” ಎಂದರು.
ಈ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ರೇಖಾ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಪ್ರತಿಮ ಮಹದೇವ್ ಉಪಸ್ಥಿತರಿದ್ದರು.
ಅಲ್ಲದೆ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ನಿರ್ದೇಶಕ ಬಸವರಾಜು, ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ಟಿ. ಸದಾಶಿವ ಮೂರ್ತಿ, ಡಿ.ಕೆ ರಾಜು, ಉದ್ದನೂರು ಗಿರೀಶ್, ಪ್ರಮೋದ್, ವಿನೋದ್, ಉಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ ಉಸ್ಮಾನ್ ಖಾನ್




















