ಮಂಡ್ಯದ ಶಂಕರೇಗೌಡ ಅವರು ಬರೋಬ್ಬರಿ 45 ವರ್ಷಗಳಿಂದ ಕೇವಲ 5 ರೂಪಾಯಿಗೆ ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ. ಅಪ್ಪಟ ಜನಸೇವೆ ಮಾಡುತ್ತಿರುವ ಇಂತಹ ಒಬ್ಬ ಮಹಾನ್ ವ್ಯಕ್ತಿಯನ್ನು ನಮ್ಮ ಜನರು ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳಿಸಿದರು. ಆದರೆ ಅದೇ ಕಡೆ, ಸಿನೆಮಾದಲ್ಲಿ 5 ರೂಪಾಯಿ ಡಾಕ್ಟರ್ ಆಗಿ ಆಕ್ಟಿಂಗ್ ಮಾಡಿದ, ದೇಶಕ್ಕೆ ಬರಬೇಕಾದ ಇನ್ಕಮ್ ಟ್ಯಾಕ್ಸ್ ಕಟ್ಟದೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ನಟ ವಿಜಯ್ ಅವರನ್ನು ಜನರು ಚುನಾವಣೆಯಲ್ಲಿ ಗೆಲ್ಲಿಸಿ ಮುಖ್ಯಮಂತ್ರಿ ಮಾಡೋಕೆ ಹೊರಟಿದ್ದಾರೆ!
ಸಿನೆಮಾದಲ್ಲಿ ತೋರಿಸುವ ಬಣ್ಣದ ಮಾತುಗಳಿಗೆ ಮರುಳಾಗುವ ನಮ್ಮ ಜನರು, ಕಣ್ಣೆದುರೇ ನಿಜವಾದ ಸೇವೆ ಮಾಡುವ ಪುಣ್ಯಾತ್ಮರನ್ನು ಮರೆತು ಹೋಗುತ್ತಾರಲ್ಲ, ಅದೇ ದೊಡ್ಡ ಟ್ರ್ಯಾಜೆಡಿ ಅಲ್ವಾ? ಅನಿಸುತ್ತಿದೆ.
ಜನರ ಮನಸ್ಥಿತಿ: ಕಪಟಕ್ಕೆ ಜೈ, ನಿಷ್ಠೆಗೆ ತಿರಸ್ಕಾರ :
ರೀಲ್ ಲೈಫ್ ಹೀರೋಗಳನ್ನು ಮೆಚ್ಚುವುದು ಬಿಟ್ಟು, ರಿಯಲ್ ಲೈಫ್ನಲ್ಲಿ ನಮಗಾಗಿ ದುಡಿಯುವ ಶಂಕರೇಗೌಡರಂತಹ ಅದೆಷ್ಟೋ ಹೀರೋಗಳನ್ನು ನಾವು ಯಾವಾಗ ಗುರುತಿಸುತ್ತೇವೋ ಗೊತ್ತಿಲ್ಲ. ಜನರ ಮನಸ್ಥಿತಿ ಬಗ್ಗೆ ಏನು ಹೇಳಬೇಕೆನ್ನುವುದೇ ತಿಳಿಯದ ಪ್ರಶ್ನೆಯಾಗಿದೆ.
ನಿಜ ಹೇಳಬೇಕೆಂದರೆ ಜನ ಸಾಮಾನ್ಯರಿಗೆ ಕಪಟ ನಾಟಕ ಮಾಡುವಂತಹ ವ್ಯಕ್ತಿಗಳು ಬೇಕಾಗಿದ್ದಾರೆ ಅಂತ ಅನಿಸುತ್ತದೆ. ಪ್ರಾಮಾಣಿಕ ವ್ಯಕ್ತಿಗಳಿಗೆ ಇವತ್ತು ಜನ ತಿರಸ್ಕಾರ ಮನೋಭಾವದಿಂದ ನೋಡುವಂತಹ ಸನ್ನಿವೇಶ ನಿರ್ಮಾಣ ಮಾಡಿದ್ದಾರೆ ಅಂತ ಅನಿಸುತ್ತದೆ.
ಸತ್ಯ, ನ್ಯಾಯ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಇಂದಿನ ಕಾಲದ ಜನರು ಗುರುತಿಸದೆ ಹೋಗುತ್ತಿರುವುದು ಈ ದೇಶದ ಬಹುದೊಡ್ಡ ದುರಂತ ಎನ್ನಬಹುದು.
ಪ್ರಾಮಾಣಿಕರಿಗೆ ಅಪಮಾನ, ನಾಟಕಕಾರರಿಗೆ ಸನ್ಮಾನ:
ಹೀಗಾದರೆ ಪ್ರಾಮಾಣಿಕವಾಗಿ ಕೆಲಸ ಮಾಡುವವರು ಮುಂದಿನ ದಿನಗಳಲ್ಲಿ ಸೇವೆ ಮಾಡಲು ಬಹಳಷ್ಟು ಯೋಚನೆ ಮಾಡುವಂತ ಸಂದರ್ಭ ಎದುರಾಗಲಿದೆ.
ಇವತ್ತಿನ ದಿನಗಳಲ್ಲಿ ನಿಯತ್ತಾಗಿ ದುಡಿಯುವವರಿಗೆ ಇಂದಿನ ಸಮಾಜ ಯಾವುದೇ ರೀತಿಯಿಂದ ಗೌರವಿಸುವ ಮತ್ತು ಗುರುತಿಸುವಂತಹ ಕೆಲಸ ಮಾಡುತ್ತಿಲ್ಲ. ಮೇಲಾಗಿ ಇಂತಹ ವ್ಯಕ್ತಿಗಳನ್ನು ಟೀಕಿಸುವ ಮುಖಾಂತರ ಅವರನ್ನು ಅಪಮಾನ ಮಾಡುವಂತ ಕೆಲಸ ಈ ಸಮಾಜದಲ್ಲಿ ನಿರಂತರವಾಗಿ ಸಾಗುತ್ತಿರುವುದು ಬಹಳ ಬೇಜಾರು ಪಡುವ ಸಂಗತಿಯಾಗಿದೆ. ಹೀಗಾಗಿ ಪ್ರಾಮಾಣಿಕ ಸೇವೆ ಮಾಡುವ ವ್ಯಕ್ತಿಗಳು ಮುಂದೆ ಬಂದು ನಿಸ್ವಾರ್ಥವಾಗಿ ಸೇವೆ ಸಲ್ಲಿಸಲು ಎಲ್ಲೋ ಒಂದು ಕಡೆ ಹಿಂಜರಿಕೆ ಪಡುವಂತ ಸನ್ನಿವೇಶಗಳು ಸಧ್ಯ ಎದುರಾಗುತ್ತಿವೆ ಎಂಬುವುದರಲ್ಲಿ ಎರಡು ಮಾತಿಲ್ಲ.
ನನ್ನ ಕಳಕಳಿಯ ವಿನಂತಿ:
ಅದಕ್ಕಾಗಿ ನಾನು ತಮ್ಮೆಲ್ಲರಲ್ಲೂ ವಿನಂತಿಸಿಕೊಳ್ಳುವುದು ಇಷ್ಟೇ, ಕಪಟ ನಾಟಕ ಮಾಡಿ ಜನರನ್ನು ಮೋಸ ಮಾಡುವ ವ್ಯಕ್ತಿಗಳನ್ನು ಖಂಡಿತವಾಗಿಯೂ ನಂಬಬೇಡಿ. ಯಾಕೆಂದರೆ ಆ ವ್ಯಕ್ತಿಗಳು ತಾತ್ಕಾಲಿಕವಾಗಿ ಜನರನ್ನು ಮರಳು ಮಾಡಿ ನಿಮ್ಮಿಂದ ಉಪಯೋಗವನ್ನು ತೆಗೆದುಕೊಂಡು ಖಂಡಿತವಾಗಿಯೂ ನಿಮ್ಮನ್ನು ಬೀಸಾಡುತ್ತಾರೆ. ಮತ್ತು ನಿಮ್ಮನ್ನು ಕೀಳಾಗಿ ಕಾಣುತ್ತಾರೆ ಎಂಬುದನ್ನು ನೀವು ದಯವಿಟ್ಟು ಎಂದೆಂದಿಗೂ ಮರೆಯಬಾರದು.
ನ್ಯಾಯ-ನೀತಿಗಾಗಿ, ಸಮಾಜದ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯುವಂತಹ ವ್ಯಕ್ತಿ ಖಂಡಿತವಾಗಿಯೂ ನಿಮ್ಮನ್ನು ಎಂದೆಂದಿಗೂ ಕೈಬಿಡುವುದಿಲ್ಲ, ನಿಮ್ಮನ್ನು ಎಂದೆಂದಿಗೂ ತಿರಸ್ಕಾರ ಮನೋಭಾವನೆಯಿಂದ ನೋಡುವುದಿಲ್ಲ. ಮತ್ತೆ ವಂಚನೆಯಿಲ್ಲದ ಜೀವನ ಸಾಗಿಸುತ್ತಾರೆ. ನಿಷ್ಠಾವಂತ ಮತ್ತು ನಿಷ್ಕಳಂಕ ವ್ಯಕ್ತಿತ್ವ ಹೊಂದಿರುತ್ತಾರೆ. ನಡತೆಯಲ್ಲಿ ನ್ಯಾಯಯುತವಾಗಿ ಹಾಗೂ ನೈತಿಕವಾಗಿ ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ. ನೇರ, ನಿರ್ಭೀತಿಯಿಂದ ಮಾತನಾಡುತ್ತಾರೆ.
ಒಳಗೊಂದು ಹೊರಗೊಂದು ವ್ಯಕ್ತಿತ್ವ ಇರುವುದಿಲ್ಲ.
ಇರೋದೆಲ್ಲಾನೂ ನೇರವಾಗಿರುತ್ತದೆ. ಇವರು ವಿಶ್ವಾಸಾರ್ಹರಾಗಿದ್ದು, ಸುಳ್ಳು ಅಥವಾ ಮೋಸ, ಕಪಟ ನಾಟಕ ಎಂದೆಂದಿಗೂ ಮಾಡುವುದಿಲ್ಲ.ನಿಷ್ಪಕ್ಷಪಾತ ಮತ್ತು ಮುಕ್ತ ಮನಸ್ಸಿನಿಂದ ಕೆಲಸ ಮಾಡುತ್ತಾರೆ. ಹೃದಯವಂತರಾಗಿರುತ್ತಾರೆ.
ಆಡಂಬರವಿಲ್ಲದ, ಸಹಜ ಜೀವನವನ್ನು ನಡೆಸುತ್ತಾರೆ.
ನಿಜವಾದ ಹೀರೋ” ಎಂದರೆ ಕೇವಲ ತೋರಿಕೆಗಾಗಿ ನಟಿಸುವವರಲ್ಲ, ಬದಲಾಗಿ ದೇಶ, ಸಮಾಜ ಮತ್ತು ಕುಟುಂಬಕ್ಕಾಗಿ ನಿಸ್ವಾರ್ಥವಾಗಿ ಜೀವಿಸುವವರು. ಸೈನಿಕರು, ರೈತರು, ಸಮಾಜದ ಉನ್ನತಿಗಾಗಿ ಶ್ರಮಿಸುವವರು ಮತ್ತು ಇತರರ ಸಹಾಯಕ್ಕೆ ನಿಲ್ಲುವವರು ಮಾತ್ರ ನಿಜವಾದ ಹೀರೋಗಳಾಗಿರುತ್ತಾರೆ. ಅಂತೆಯೇ
ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ, ಧೈರ್ಯದಿಂದ ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸುವ ವ್ಯಕ್ತಿಗಳು,ಅನಾಥರನ್ನು ರಕ್ಷಿಸುವುದು, ಅಪರಿಚಿತರಿಗೆ ಸಹಾಯ ಮಾಡುವುದು, ಮತ್ತು ಸಮಾಜದ ಕೆಟ್ಟ ಆಲೋಚನೆಗಳನ್ನು ಬದಲಾಯಿಸುವವರು.
ತಮ್ಮ ಪ್ರಾಣದ ಹಂಗು ತೊರೆದು, ಸ್ವಾರ್ಥವಿಲ್ಲದೆ ಇತರರ ಜೀವ ಕಾಪಾಡುವವರು.ಅಹಂಕಾರವನ್ನು ಬದಿಗೊತ್ತಿ, ಅನ್ಯಾಯವನ್ನು
ಮೆಟ್ಟುನಿಂತು, ಇದ್ದಿದ್ದನ್ನು ಇದ್ದ ಹಾಗೆ ನೇರವಾಗಿ ಹೇಳುವ ಎದೆಗಾರಿಕೆದವರು. ಸಮಾಜದ ಸರ್ವತೋಮುಖ, ಸರ್ವಾಂಗೀಣ ಉನ್ನತಿಗಾಗಿ
ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸದಾ ಕಾಲ ದುಡಿದು, ಇತರರಿಗೆ ಸಹಾಯ, ಸಹಕಾರ ಮಾಡುವವರು ,ನಿಜವಾದ ಹೀರೋಗಳು, ನಿಜವಾದ ಸಮಾಜ ಸೇವಕರು.
ಹಾಗಾಗಿ ಇಂತಹ ವ್ಯಕ್ತಿಗಳನ್ನು, ಗುರುತಿಸುವಂತಹ ಕೆಲಸ ಮಾಡಬೇಕು. ಅಂದಾಗಲೇ ಮಾತ್ರ ಈ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಆಗುತ್ತದೆ. ಸೂಪರ್ ಪವರ್ ರಾಷ್ಟ್ರವಾಗಲೂ ಸಹಕಾರಿಯಾಗುತ್ತದೆ.
ಕೊನೆಯದಾಗಿ…ಪರದೆ ಮೇಲಿನ ಹೀರೋ ಒಂದು ದಿನ ಮರೆಯಾಗುತ್ತಾನೆ. ಆದರೆ ಜನರ ಹೃದಯದಲ್ಲಿ ನೆಲೆಸುವ ನಿಜವಾದ ಹೀರೋ ಎಂದೆಂದಿಗೂ ಅಮರನಾಗುತ್ತಾನೆ. ಇದು ಸತ್ಯ.
- ಸಂಗಮೇಶ ಎನ್ ಜವಾದಿ
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಪರಿಸರ ಸಂರಕ್ಷಕರು, ಬೀದರ್ ಜಿಲ್ಲೆ.




















