ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ನಮ್ಮ ತಂದೆಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಿಕೋಟದಲ್ಲಿ ( ಬಿಜಾಪುರ – ವಿಜಯಪುರ ಜಿಲ್ಲೆ) ಮರಾಠಿಯ ನಾಲ್ಕನೆಯ ತರಗತಿಯಿಂದ 1928-29 ರಲ್ಲಿ ಪ್ರಾರಂಭಿಸಿದರು. ಅವರು ಮರಾಠಿಯ ನಾಲ್ಕನೆಯ ತರಗತಿಯನ್ನು ಮುಗಿಸಿದ ಮೇಲೆ ಅವರನ್ನು ಇಂಗ್ಲೀಷಿನ ಒಂದನೇ ತರಗತಿಗೆ ತಿಕೋಟದ ಹೈಸ್ಕೂಲಿಗೆ ಸೇರಿಸಲಾಯ್ತು. ಅವರು ಇಂಗ್ಲಿಷಿನ 3 ನೇ ತರಗತಿಯನ್ನು 1934 ರಲ್ಲಿ ಮುಗಿಸಿದರು. ಅವರು 1936 ರಲ್ಲಿ ಮೂರನೇ ತರಗತಿಯ ವರ್ನಾಕುಲರ್ ಪರೀಕ್ಷೆಯನ್ನು ( ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆ ) ಬಿಜಾಪುರದಲ್ಲಿ ಬರೆದು ಅದರಲ್ಲಿ ಸಾಮಾನ್ಯ ವರ್ಗದಲ್ಲಿ ತೇರ್ಗಡೆಯಾದರು. ಅವರು ಮುಂದಿನ ಶಿಕ್ಷಣಕ್ಕಾಗಿ ಬಿಜಾಪುರಕ್ಕೆ ಹೋಗಬೇಕಾಗಿತ್ತು. ಆದರೆ, ವಿಧಿ ಹಾಗೂ ವಿಪರೀತ ಪರಿಸ್ಥಿತಿಗಳಿಂದಾಗಿ ಅವರು ಶಿಕ್ಷಣಕ್ಕೆ ವಿರಾಮ ಹೇಳಬೇಕಾಯಿತು.
ಅವರು ಇಂಗ್ಲಿಷ್ ಮೊದಲ ತರಗತಿಯಿಂದ ಮೂರನೇ ತರಗತಿಯವರೆಗೆ ಕ್ಲಾಸಿಗೇ ಮೊದಲಿಗರಾಗಿ ಬಹುಮಾನ ಗಳಿಸಿದ್ದರು ( ಬುಕ್ಕುಗಳ ರೂಪದಲ್ಲಿ) ಅವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಅವರಿಗೆ ಶಾಲೆಯ ಗ್ಯಾದರಿಂಗನಲ್ಲಿ ಮಾಡಿದ ನಾಟಕಕ್ಕಾಗಿ ಒಳ್ಳೆಯ ನಟನೆಂದು ಘೋಷಿಸಲಾಗಿತ್ತು. ಶಾಲೆಯ ಎಲ್ಲ ಕ್ರೀಡಾ ಚಟುವಟಿಕೆಗಳಲ್ಲಿ ಅವರು ಭಾಗವಹಿಸುತ್ತಿದ್ದರು. ಹಾಯ್ ಜಂಪ್, ಲಾಂಗ್ ಜಂಪ್, ಹುತುತು ( ಕಬಡ್ಡಿ) ಯಲ್ಲಿ ಅವರು ಪರಿಣತರಾಗಿದ್ದರು. ‘ಸೂರ್ಯನಮಸ್ಕಾರ’ ದಲ್ಲಿಯೂ ಅವರಿಗೆ ಬೆಳ್ಳಿಯ ಪದಕ ಸಿಕ್ಕಿತ್ತು. ಗಣೇಶನ ಹಬ್ಬದಲ್ಲಿ ಗಣೇಶನ ಎದುರುಗಡೆ ಮಾಡುವ ಹಾಡು ಹಾಗೂ
ನೃತ್ಯದ ತಂಡದ ಮುಂದಾಳತ್ವವನ್ನು ಅವರು ವಹಿಸುತ್ತಿದ್ದರು.
ಅವರ ಬಹುಮುಖ ಪ್ರತಿಭೆ ಹಾಗೂ ಕ್ರಿಯಾಶೀಲತೆ ಅವರು ಮುಂದಿನ ಪೀಳಿಗೆಗೆ ಕೊಟ್ಟ ಆಸ್ತಿಯಾಗಿದೆ.
- ಪ್ರಮೋದ್ ಕುಲಕರ್ಣಿ




















