ಬಸವಕಲ್ಯಾಣ ಗವಿಮಠದಲ್ಲಿ ಶ್ರಾವಣ ಮಾಸದ ವಿಶೇಷ ಉಪನ್ಯಾಸ
ಬಸವಕಲ್ಯಾಣ: ಕಲ್ಯಾಣದ ನೆಲವು ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು, ಸಿದ್ಧರಾಮ ಸೇರಿದಂತೆ ಅಸಂಖ್ಯಾತ ಶರಣರ ಚಿಂತನೆ, ಅನುಭವ ಮಂಟಪದ ಸಂವಾದ ಹಾಗೂ ಸಾಮಾಜಿಕ ಪರಿವರ್ತನೆಯಿಂದ ವಿಶ್ವದ ಗಮನ ಸೆಳೆದ ಪುಣ್ಯಭೂಮಿಯಾಗಿದೆ.
ಈ ಶರಣ ಪರಂಪರೆಯಲ್ಲಿ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಸ್ಥಾನ ವಿಶಿಷ್ಟವಾಗಿದೆ ಎಂದು ಶರಣು ಅಲಗುಡೆ ಹೇಳಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಗವಿಮಠ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ರುದ್ರಮುನಿ ಶಿವಾಚಾರ್ಯರು ಕಲ್ಯಾಣಕ್ಕೆ ಆಗಮಿಸಿ ಪಂಚಸೂತ್ರ ಲಿಂಗವನ್ನು ಸ್ಥಾಪಿಸಿ, ಲಿಂಗಸನ್ನಿಧಿಯನ್ನು ಕೇಂದ್ರವಾಗಿಟ್ಟುಕೊಂಡು ಧಾರ್ಮಿಕ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿದರು ಎಂಬ ಪರಂಪರೆ ಇದೆ. ಕಲ್ಯಾಣ ಕ್ರಾಂತಿಯ ನಂತರ ಶರಣರ ಆಧ್ಯಾತ್ಮಿಕ ಚಿಂತನೆಗೆ ಅವರ ಗುರುಬಲ ದೊರೆತಿದೆ ಎಂದು ಅವರು ಹೇಳಿದರು. ರುದ್ರಮುನಿ ಶಿವಾಚಾರ್ಯರ ಜೀವನಕ್ಕೆ ಸಂಬಂಧಿಸಿದ ಉಳವಿ ಪಯಣ, ಕಾದರವಳ್ಳಿ ಪ್ರಸಂಗ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಪರಂಪರೆಯಲ್ಲಿ ಉಲ್ಲೇಖವಾಗಿವೆ ಎಂಬ ಸ್ಥಳೀಯ ಐತಿಹ್ಯವಿದೆ. ಖ್ಯಾಡ ಗ್ರಾಮದಲ್ಲಿನ ಸಂಘರ್ಷ ಹಾಗೂ ಬಾಳೇಹಳ್ಳಿಯಲ್ಲಿ ವೀರಭದ್ರನ ಪ್ರತಿಷ್ಠಾಪನೆಗೂ ಸಂಬಂಧಿಸಿದ ಪರಂಪರಾ ಉಲ್ಲೇಖಗಳಿವೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ನರಸಿಂಗ್ ರೆಡ್ಡಿ ಗದಲೆಗಾಂವ ಮಾತನಾಡಿ, ೧೨ನೇ ಶತಮಾನದ ರುದ್ರಮುನಿ ಶಿವಾಚಾರ್ಯರ ಉತ್ಸವ ಮೂರ್ತಿಯಾಗಿ ಗವಿಮಠದ ಪೂಜ್ಯರು ಬೀದರ್ ಜಿಲ್ಲೆಯಾದ್ಯಂತ ಕಂಗೊಳಿಸುತ್ತಿದ್ದಾರೆ ಎಂದರು.
ಅಭಿನವ ಶ್ರೀಗಳು ಮಾತನಾಡಿ, ಬಸವಣ್ಣನವರ “ ಕಾಯಕವೇ ಕೈಲಾಸ, ದಾಸೋಹವೇ ಧರ್ಮ ” ಎಂಬ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ಯ, ಪ್ರಾಮಾಣಿಕತೆ, ಕರುಣೆ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಪಾಲಿಸಬೇಕು. ಯುವಜನತೆ ವ್ಯಸನಗಳಿಂದ ದೂರವಿದ್ದು ಶಿಕ್ಷಣ, ಸಂಸ್ಕಾರ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಮರೆಪ್ಪಾ ಪೊಲೀಸ್ ಪಾಟೀಲ ತ್ರಿಪುರಾಂತ ಹಾಗೂ ವಿನೋದ ಬಡಗೆಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ಅಭಿಷೇಕ ರಾಮಣ್ಣನವರ ಸ್ವಾಗತಿಸಿದರು.
ಮಲ್ಲಿಕಾರ್ಜುನ ಅಲಗುಡೆ ನಿರೂಪಿಸಿದರು. ಶರಣಬಸಪ್ಪ ಅಲಗುಡೆ ಪ್ರಾರ್ಥನಾ ಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಶರಣಪ್ಪ ಬಿರಾದಾರ, ಎ.ಜಿ. ಪಾಟೀಲ, ಲಕ್ಷ್ಮಣಸಿಂಗ್ ಸಿಂಗಾರೆ, ರಾಕೇಶ ಪುರವಂತ, ಗೋವಿಂದ ರೆಡ್ಡಿ, ಶಿವಶಂಕರ ರಾಮಣ್ಣನವರ, ವಿರೇಶ ಗಡೆದಾರ, ಬಾಬುರಾವ ಚಳಕಾಪುರೆ ಹಾಗೂ ಮಹಾರಾಷ್ಟ್ರದ ಶಿರಡಿಯ ಅನೇಕ ಭಕ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ ಶ್ರೀನಿವಾಸ ಬಿರಾದಾರ




















