ತಾಯಿ ಜನ್ಮ ನೀಡಿದರೆ, ಗುರು ಬದುಕನ್ನು ರೂಪಿಸುತ್ತಾನೆ. ತಂದೆ ಬೆರಳಿಡಿದು ನಡೆಯಲು ಕಲಿಸಿದರೆ, ಗುರು ಕೈಹಿಡಿದು ಬದುಕಲು ಕಲಿಸುತ್ತಾನೆ. ಈ ನುಡಿಗಳು ಮಾನವ ಜೀವನದ ಅತ್ಯುನ್ನತ ಮತ್ತು ಪವಿತ್ರವಾದ ಎರಡು ಶಕ್ತಿಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಬಿಂಬಿಸುತ್ತವೆ.
ನಮ್ಮ ಅಸ್ತಿತ್ವಕ್ಕೆ ತಾಯಿಯೇ ಮೊದಲ ಪ್ರೇರಣೆ. ಅವಳು ತನ್ನ ರಕ್ತ-ಮಾಂಸಗಳನ್ನು ಹಂಚಿ ನಮಗೆ ಈ ಸುಂದರ ಸೃಷ್ಟಿಯನ್ನು ನೋಡುವ ಭಾಗ್ಯ ಕರುಣಿಸುತ್ತಾಳೆ. ಕೇವಲ ಜನ್ಮ ನೀಡುವುದಷ್ಟೇ ಅಲ್ಲದೆ, ತನ್ನ ಮಮತೆಯ ಬೆರಳಿಡಿದು ನಮಗೆ ನೆಲದ ಮೇಲೆ ಮೊದಲ ಹೆಜ್ಜೆಯನ್ನಿಡಲು ಕಲಿಸುತ್ತಾಳೆ. ತಾಯಿಯ ಮಡಿಲು ನಮ್ಮ ಮೊದಲ ಪಾಠಶಾಲೆ, ಅವಳ ಪ್ರೀತಿಯ ನುಡಿಗಳೇ ನಮ್ಮ ಮೊದಲ ಸಂಸ್ಕಾರ. ಆದರೆ ಕೇವಲ ಹೆಜ್ಜೆಯನ್ನಿಡುವುದರಿಂದ ಜೀವನ ಪೂರ್ಣವಾಗುವುದಿಲ್ಲ. ಆ ಹೆಜ್ಜೆಗಳು ಸಾಗಬೇಕಾದ ಸನ್ಮಾರ್ಗ ಯಾವುದು ಎಂಬುದನ್ನು ತೋರಿಸುವವನೇ ಗುರು.
ಜನ್ಮ ಪಡೆದ ಜೀವಕ್ಕೆ ಅರಿವಿನ ಜ್ಞಾನದೀಪವನ್ನು ಹಚ್ಚಿ, ಅಜ್ಞಾನದ ಕತ್ತಲನ್ನು ದೂರ ಮಾಡುವವನು ಗುರು. ಬದುಕಿನ ಏರಿಳಿತಗಳಲ್ಲಿ, ಕಷ್ಟ-ಸುಖಗಳ ಬಿರುಗಾಳಿಯಲ್ಲಿ ಧೃತಿಗೆಡದೆ ಹೇಗೆ ಬದುಕಬೇಕೆಂದು ಗುರು ಕೈಹಿಡಿದು ಮುನ್ನಡೆಸುತ್ತಾನೆ. ತಾಯಿ ನಮಗೆ ಭೌತಿಕವಾದ ಶರೀರವನ್ನು ನೀಡಿದರೆ, ಗುರು ಆ ಶರೀರಕ್ಕೊಂದು ದಿವ್ಯವಾದ ವ್ಯಕ್ತಿತ್ವವನ್ನು ಹಾಗೂ ಬದುಕಿಗೊಂದು ಉದಾತ್ತ ಧ್ಯೇಯವನ್ನು ರೂಪಿಸಿಕೊಡುತ್ತಾನೆ.
” ಗುರುವಿಲ್ಲದ ವಿದ್ಯೆಯು ಶಿರವಿಲ್ಲದ ಕಬಂಧದಂತೆ ” ಎಂಬುದು ಮಹಾನ್ ಸಂತ, ದಾರ್ಶನಿಕ ಕನಕದಾಸರ ಅಮೂಲ್ಯ ಸಂದೇಶ. ಕೇವಲ ಪುಸ್ತಕದ ಬದನೆಕಾಯಿಯಾಗುವ ಜ್ಞಾನಕ್ಕೆ ಆತ್ಮವಿಶ್ವಾಸ ಮತ್ತು ಸರಿಯಾದ ಮಾರ್ಗದರ್ಶನ ಸಿಗದೇ ಹೋದರೆ ಆ ವಿದ್ಯೆ ದಾರಿಯಿಲ್ಲದ ದೋಣಿಯಂತಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಎಷ್ಟೇ ಪದವಿಗಳನ್ನು ಪಡೆದರೂ, ನೈತಿಕತೆ ಮತ್ತು ವಿವೇಕವನ್ನು ಕಲಿಸಲು ನಮಗೊಬ್ಬ ಮಾರ್ಗದರ್ಶಕನ ಅಗತ್ಯವಿದೆ. ಗುರುವಿನ ಚರಣಗಳಿಗೆ ಶರಣಾದಾಗ ಮಾತ್ರ ವಿದ್ಯೆಗೆ ಪೂರ್ಣತೆ ಸಿಗುತ್ತದೆ, ಬದುಕು ಸಾರ್ಥಕವಾಗುತ್ತದೆ. ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಗುರುವನ್ನು ಗೌರವಿಸೋಣ, ನಮ್ಮ ಜ್ಞಾನವನ್ನು ಸಮಾಜದ ಹಿತಕ್ಕೆ ಬಳಸೋಣ.
ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೇಳಿದಂತೆ “ಉತ್ತಮ ಪುಸ್ತಕಗಳು ನೂರು ಶಿಕ್ಷಕರಿಗೆ ಸಮಾನವಾಗಿರಬಹುದು, ಆದರೆ ಒಬ್ಬ ಉತ್ತಮ ಶಿಕ್ಷಕ ಸಾವಿರ ಪುಸ್ತಕಗಳಿಗೆ ಸಮಾನ.” ಈ ನುಡಿಮುತ್ತು ಕೇವಲ ವಾಕ್ಯವಲ್ಲ, ಅದು ಗುರುವಿನ ಸರ್ವೋಚ್ಚ ಸ್ಥಾನಕ್ಕೆ ಹಿಡಿದ ಕೈಗನ್ನಡಿ, ಜ್ಞಾನದ ವಿಸ್ತಾರವನ್ನು ಅಳೆಯುವ ಮಾನದಂಡ. ಪುಸ್ತಕಗಳು ಮಾಹಿತಿಯನ್ನು ನೀಡಿದರೆ, ಶಿಕ್ಷಕನು ಆ ಮಾಹಿತಿಯನ್ನು ಜ್ಞಾನವನ್ನಾಗಿ, ಜ್ಞಾನವನ್ನು ಬದುಕಿನ ಮೌಲ್ಯವನ್ನಾಗಿ ಪರಿವರ್ತಿಸುತ್ತಾನೆ. ಸೋತು ಕುಳಿತಾಗ ಧೃತಿಗೆಡದಂತೆ ಹೆಗಲ ಮೇಲೆ ಕೈಯಿಟ್ಟು, ನಡುಗುವ ಕೈಗಳಿಗೆ ಭರವಸೆ ತುಂಬುವವನೇ ನಿಜವಾದ ಗುರು. ಕಲ್ಲು ಬಂಡೆಯಂತಿರುವ ಮಗುವಿನ ಮನಸ್ಸನ್ನು ಕೆತ್ತಿ ಅದಕ್ಕೊಂದು ಸುಂದರ ಮೂರ್ತಿಯ ರೂಪ ಕೊಡುವ ಶಿಲ್ಪಿಯೇ ಶಿಕ್ಷಕ.
ಅಕ್ಷರ ಲೋಕದ ಸಾವಿರಾರು ಗ್ರಂಥಗಳ ಸಾರವೆಲ್ಲವೂ ಒಬ್ಬ ಆದರ್ಶ ಶಿಕ್ಷಕನ ಪ್ರೇರಣಾದಾಯಕ ಮಾತುಗಳಲ್ಲಿ ಅಡಗಿರುತ್ತದೆ. ಅದಕ್ಕಾಗಿಯೇ ನಮ್ಮ ಸಂಸ್ಕೃತಿಯಲ್ಲಿ “ಆಚಾರ್ಯ ದೇವೋ ಭವ” ಎಂದು ಗುರುವಿಗೆ ದೈವತ್ವದ ಸ್ಥಾನ ನೀಡಲಾಗಿದೆ.
ಈ ದಿನ ಶಿಕ್ಷಕರ ದಿನಾಚರಣೆ, ಇದು ಕೇವಲ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿರದೆ ಪ್ರತಿದಿನವೂ ಶಿಕ್ಷಕರಿಗೆ ನಮಿಸೋಣ, ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗೋಣ. ಇವತ್ತು ನಾವು ಯಾವುದೇ ಒಂದು ಉನ್ನತ ಮಟ್ಟದ ಸ್ಥಾನದಲ್ಲಿ ಇದ್ದೇವೆ ಎಂದರೆ ಅದಕ್ಕೆ ಎರಡನೇ ತಾಯಿಯಾಗಿರುವ ಗುರುವೇ ಮೂಲ. ಇಂದು ನಮಗೆ ಸ್ವಲ್ಪ ಬಿಡುವು ಇದ್ದರೆ, ನಮಗೆ ಅಕ್ಷರ ಜ್ಞಾನ ನೀಡಿದ ಪ್ರತಿಯೊಬ್ಬ ಗುರುವನ್ನು ಭೇಟಿ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದರೆ ನಮ್ಮ ಬದುಕು ಸಾರ್ಥಕವಾಗುತ್ತದೆ.
ಕಾಲ ಬದಲಾಗಬಹುದು, ಪಠ್ಯ ಬದಲಾಗಬಹುದು, ಕಪ್ಪು ಹಲಗೆಯು ಸ್ಮಾರ್ಟ್ ಬೋರ್ಡ್ ಆಗಬಹುದು, ಶಾಲೆಯ ಕೊಠಡಿಗಳು ಬದಲಾಗಬಹುದು, ಶಾಲಾ ಶಿಕ್ಷಕರು ಬದಲಾಗಬಹುದು, ಆದರೆ ಗುರು-ಶಿಷ್ಯರ ಈ ಪವಿತ್ರ ಸಂಬಂಧ ನಿನ್ನೆಗೂ ಇಂದಿಗೂ ಎಂದೆಂದಿಗೂ – ಅಮರ.
ಬದುಕಿನ ಕತ್ತಲೆಯನ್ನು ಓಡಿಸಿ ಸುಜ್ಞಾನದ ಜ್ಯೋತಿಯನ್ನು ಬೆಳಗುವ ಪ್ರತಿಯೊಬ್ಬ ಶಿಕ್ಷಕನಿಗೂ ಕೋಟಿ ಕೋಟಿ ನಮನಗಳು.

- ಶ್ರೀ ಮುತ್ತು ಯ. ವಡ್ಡರ
ಶಿಕ್ಷಕರು, HPS ಹಿರೇಮಳಗಾವಿ
ಬಾಗಲಕೋಟೆ – 9845568484




















