ಮಡಿಕೇರಿ : ತಾಲೂಕಿನ ಸಿಂಕೋನ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನೆ ಕುರಿತ ಮಾಹಿತಿ ಕಾರ್ಯಾಗಾರ ಹಾಗೂ 9ನೇ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಅಂಗವಾಗಿ ಸೀಮಂತ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಅವರು, ಗರ್ಭಾವಸ್ಥೆಯಿಂದ ಮಗುವಿನ ಎರಡು ವರ್ಷದವರೆಗಿನ ಅವಧಿಯಲ್ಲಿ ತಾಯಿ-ಮಗುವಿಗೆ ಪೌಷ್ಟಿಕ ಆಹಾರ ಅತ್ಯಗತ್ಯ. ಗರ್ಭಿಣಿಯರು ಮತ್ತು ಬಾಣಂತಿಯರು ಸಮತೋಲನ ಆಹಾರದ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗೃಹಲಕ್ಷ್ಮಿ ಮರುಪರಿಶೀಲನೆ ಕುರಿತು ಮಾಹಿತಿ ನೀಡಿದ ಅವರು, SIR ಪ್ರಕ್ರಿಯೆ ನಂತರ ಫಲಾನುಭವಿಗಳ ಮನೆ ಭೇಟಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ತಮ್ಮ ಹೆಸರಿನ ಮೊಬೈಲ್ ಸಂಖ್ಯೆಯನ್ನು ಆಧಾರ್ಗೆ ಜೋಡಣೆ ಮಾಡಿಕೊಳ್ಳಬೇಕು. ಸಾಲವಿಲ್ಲದ ವೈಯಕ್ತಿಕ ಬ್ಯಾಂಕ್ ಖಾತೆ ಸಿದ್ಧವಾಗಿಟ್ಟುಕೊಳ್ಳಬೇಕು. ಜಂಟಿ ಖಾತೆ ಅಥವಾ ಸಂಘದ ಖಾತೆ ಇದ್ದರೆ ಹೊಸ ವೈಯಕ್ತಿಕ ಅಥವಾ IPPB ಖಾತೆ ತೆರೆಯಬೇಕು. ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಹಾಗೂ GI ನಂಬರ್ ಸುರಕ್ಷಿತವಾಗಿಡಬೇಕು ಎಂದರು.
ಆಧಾರ್ ಆಧಾರಿತ ಮುಖದ ದೃಢೀಕರಣ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೇವಾ ಕೇಂದ್ರಗಳಲ್ಲಿ ನೆರವು ಪಡೆಯುವಂತೆ ಸೂಚಿಸಿದರು.
ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಸೀಮಂತ ಕಾರ್ಯಕ್ರಮ ನೆರವೇರಿಸಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ, ಭಾಗ್ಯಲಕ್ಷ್ಮಿ ಯೋಜನೆ, ತಾಯಿ-ಮಗುವಿನ ಆರೈಕೆ, ಲಸಿಕೆಗಳ ಮಹತ್ವ ಹಾಗೂ ಮೂಢನಂಬಿಕೆಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ವರದಿ: ಪ್ರಿತುನ್ ಪೂವಣ್ಣ




















