ಬಳ್ಳಾರಿ / ಕಂಪ್ಲಿ : ರಂಗೋಲಿ ಕಲೆಯು ಭಾರತದ ಪುರಾತನ ಜಾನಪದ ಕಲೆಯಾಗಿದ್ದು, ಅದರ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಹಾಗೂ ನವೀನ ವಿನ್ಯಾಸಗಳ ಮೂಲಕ ಈ ಕಲೆಯನ್ನು ಮತ್ತಷ್ಟು ಬೆಳೆಸಬೇಕಾದ ಅಗತ್ಯವಿದೆ ಎಂದು ವೀರಶೈವ ಲಿಂಗಾಯತ ಮಹಾವೇದಿಕೆಯ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ ಹೇಳಿದರು.
ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದ ಹಳೆ ಹೌಸಿಂಗ್ ಬೋರ್ಡ್ ಕಾಲನಿಯ ಶ್ರೀ ವಿನಾಯಕ ಮಹಾಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ರಂಗೋಲಿ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸೃಜನಶೀಲತೆಯ ಪ್ರತೀಕವಾಗಿದೆ. ಹಿಂದಿನ ಕಾಲದಿಂದಲೂ ಮನೆಗಳ ಮುಂದೆ ರಂಗೋಲಿ ಬಿಡಿಸುವ ಮೂಲಕ ಶುಭ, ಸೌಂದರ್ಯ ಹಾಗೂ ಸಂಸ್ಕೃತಿಯನ್ನು ವ್ಯಕ್ತಪಡಿಸಲಾಗುತ್ತಿದೆ. ಇಂತಹ ಸಾಂಪ್ರದಾಯಿಕ ಕಲೆಗಳು ಮುಂದಿನ ಪೀಳಿಗೆಯ ಮಕ್ಕಳಿಗೆ ಪರಿಚಯವಾಗುವಂತೆ ಬಾಲ್ಯದಿಂದಲೇ ರಂಗೋಲಿ ಕಲೆಯನ್ನು ಕಲಿಸಬೇಕು ಎಂದರು.
ಇಂದಿನ ಆಧುನಿಕ ಜೀವನಶೈಲಿಯ ನಡುವೆಯೂ ರಂಗೋಲಿ ಕಲೆಯ ಮೇಲಿನ ಆಸಕ್ತಿ ಕಡಿಮೆಯಾಗದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಹಿಳೆಯರು ಹಾಗೂ ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು. ಸಾಂಪ್ರದಾಯಿಕ ವಿನ್ಯಾಸಗಳ ಜತೆಗೆ ಹೊಸ ಆಲೋಚನೆ, ಬಣ್ಣಗಳ ಸಂಯೋಜನೆ ಹಾಗೂ ವಿಭಿನ್ನ ವಿನ್ಯಾಸಗಳನ್ನು ಅಳವಡಿಸಿಕೊಂಡು ರಂಗೋಲಿ ಕಲೆಯನ್ನು ಮತ್ತಷ್ಟು ಜನಪ್ರಿಯಗೊಳಿಸಬೇಕು ಎಂದು ಅವರು ಆಶಿಸಿದರು.
ರಂಗೋಲಿ ಸ್ಪರ್ಧೆಯಲ್ಲಿ ರೇಷ್ಮಾ ಪ್ರಥಮ, ಶ್ರೀಲೇಖಾ ದ್ವಿತೀಯ ಹಾಗೂ ಅನುಶ್ರೀ ತೃತೀಯ ಬಹುಮಾನ ಪಡೆದುಕೊಂಡರು. ವಾಲ್ಮೀಕಿ ಸಮಾಜದ ಮುಖಂಡ ಪಿ. ವೀರೇಶ್ ಅವರು ವಿಜೇತರಿಗೆ ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಈ ಸಂದರ್ಭದಲ್ಲಿ ಚಿತ್ರಕಲೆ ಶಿಕ್ಷಕ ರಾಮಚಂದ್ರ ಚಿತ್ರಗಾರ, ಪ್ರಮುಖರಾದ ಎಚ್. ಶಬ್ಬೀರ್ ಸೇರಿದಂತೆ ಶ್ರೀ ವಿನಾಯಕ ಮಹಾಮಂಡಳಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಮಹಿಳೆಯರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















