
ಮಡಿಕೇರಿ ನಗರಸಭೆಯ ಪೌರಾಯುಕ್ತ ಹೆಚ್.ಆರ್.ರಮೇಶ್
ಅವರ ಕಚೇರಿ ಮತ್ತು ಮನೆಗಳ ಮೇಲೆ ಲೋಕಾಯುಕ್ತ
ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು.
ಆದಾಯಕ್ಕೂ ಮೀರಿ ಆಸ್ತಿ ಗಳಿಕೆಯ ಆರೋಪ ಕೇಳಿ
ಬಂದ ಹಿನ್ನೆಲೆಯಲ್ಲಿದೇ ದಾಳಿ ನಡೆದಿದ್ದು, ಚಿನ್ನಾಭರಣ, ನಗದು ಹಾಗೂ ಜಮೀನಿನ ದಾಖಲೆಗಳನ್ನು ವಶಕ್ಕೆ
ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಿಗ್ಗೆ 6.30ರ ಸುಮಾರಿನಲ್ಲಿ ಮೈಸೂರು ಲೋಕಾಯುಕ್ತ ಎಸ್.ಪಿ. ಉದೇಶ್ ಅವರ
ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ
ಡಿವೈಎಸ್‌ಪಿ, ತನಿಖಾಧಿಕಾರಿ ದಿನಕರ್ ಶೆಟ್ಟಿ ಹಾಗೂ
ಅಧಿಕಾರಿಗಳು ದಾಳಿ ನಡೆಸಿದರು. ನಗರದ ದಾಸವಾಳ
ರಸ್ತೆಯಲ್ಲಿರುವ ಪೌರಾಯುಕ್ತರ ವಸತಿಗೃಹ, ಕಚೇರಿ
ಮತ್ತು ಮಕ್ಕಂದೂರು ಗ್ರಾಮದಲ್ಲಿರುವ ಸ್ವಂತ ಮನೆಗಳ ಮೇಲೆ ದಾಳಿ ನಡೆಸಲಾಯಿತು. ದಾಳಿ ಸಂದರ್ಭ ಪತ್ತೆಯಾದ ಚಿನ್ನಾಭರಣ, ಬೆಳ್ಳಿಯ ಆಭರಣಗಳು, ಲಕ್ಷಾಂತರ ನಗದು, ಜಮೀನಿನ ಪತ್ರ, 1 ಅಂಗಡಿ ಮಳಿಗೆ, 1 ಕಾರು, 1 ಬೈಕ್ ನ ದಾಖಲೆಗಳು ಮತ್ತು ಕೆಲವು ಕಡತಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕ್ ಲಾಕರ್ ನ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು,
ಬುಧವಾರವೂ ತನಿಖೆ ಮುಂದುವರಿಯಲಿದೆ ಎಂದು
ತಿಳಿದು ಬಂದಿದೆ. ಮಡಿಕೇರಿ ಲೋಕಾಯುಕ್ತ ವೃತ್ತ
ನಿರೀಕ್ಷಕಿ ವೀಣಾ ನಾಯಕ್, ಚಾಮರಾಜನಗರ
ಲೋಕಾಯುಕ್ತ ವೃತ್ತ ನಿರೀಕ್ಷಕ ಸುಧಾಕರ್ ಹಾಗೂ
ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಪ್ರಿತುನ್ ಪೂವಣ್ಣ




















