ಗಂಗಾವತಿ: ಕಾರಟಗಿ ಪಟ್ಟಣದಲ್ಲಿ ಅಕ್ಟೋಬರ್ 24 ಮತ್ತು 25 ರಂದು ಅತ್ಯಂತ ವೈಭವದಿಂದ ಆಯೋಜನೆಗೊಳ್ಳಲಿರುವ 15ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಂಶೋಧಕ, ಇತಿಹಾಸಕಾರರು ಹಾಗೂ ಸಾಹಿತಿಗಳಾದ ಡಾ. ಶರಣಬಸಪ್ಪ ಕೋಲ್ಕಾರ್ ಮತ್ತು ಅವರ ಧರ್ಮಪತ್ನಿ ಅವರಿಗೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಎಂದು ಚುಸಾಪ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ತಿಳಿಸಿದರು.
ಅವರು ಗಂಗಾವತಿಯ ಜಯನಗರದ ಶ್ರೀ ಸತ್ಯನಾರಾಯಣ ದೇವಸ್ಥಾನದ ಹತ್ತಿರದಲ್ಲಿನ ಅವರ ಸ್ವ-ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ, ಜಿಲ್ಲೆಯ ಹೆಮ್ಮೆಯ ಸಾಹಿತಿ ದಂಪತಿಗಳನ್ನು ಶಾಲು ಹೊದಿಸಿ ಹಾಗೂ ಫಲಪುಷ್ಪಗಳನ್ನು ನೀಡಿ ಅತ್ಯಂತ ಆದರದಿಂದ ಗೌರವ ಪೂರ್ವಕವಾಗಿ ಅಭಿನಂದಿಸಿ ಮಾತನಾಡಿದ ಅವರು “ಕೊಪ್ಪಳ ಜಿಲ್ಲೆಯ ಇತಿಹಾಸ, ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಡಾ. ಶರಣಬಸಪ್ಪ ಕೋಲ್ಕಾರ್ ಅವರು ನೀಡಿರುವ ಕೊಡುಗೆ ಅಪಾರವಾದದ್ದು. ಇಂತಹ ಮಹಾನ್ ಸಾಧಕರಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ಇಡೀ ಜಿಲ್ಲೆಯ ಸಾಹಿತ್ಯ ವಲಯಕ್ಕೆ ಸಂದ ಗೌರವವಾಗಿದೆ. ಅವರ ಯಶಸ್ಸಿನ ಬೆನ್ನೆಲುಬಾಗಿ ನಿಂತಿರುವ ಅವರ ಧರ್ಮಪತ್ನಿಯವರನ್ನೂ ಸೇರಿಸಿ ದಂಪತಿಗಳನ್ನು ಸನ್ಮಾನಿಸುತ್ತಿರುವುದು ನಮ್ಮ ಪರಿಷತ್ತಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ,” ಎಂದು ಪ್ರಶಂಸಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮ್ಮೇಳನಾಧ್ಯಕ್ಷ ಡಾ. ಶರಣಬಸಪ್ಪ ಕೋಲ್ಕಾರ್ ಅವರು, ಚುಟುಕು ಸಾಹಿತ್ಯ ಪರಿಷತ್ತಿನ ಈ ಪ್ರೀತಿ ಮತ್ತು ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು. ಮುಂಬರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಕೇವಲ ಸಾಹಿತ್ಯೋತ್ಸವವನ್ನಾಗಿ ಮಾತ್ರವಲ್ಲದೆ, ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಮತ್ತು ಜನಸಾಮಾನ್ಯರ ಆಶೋತ್ತರಗಳಿಗೆ ಧ್ವನಿಯಾಗುವಂತೆ ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಿನಂತಿಸಿದರು.
ಈ ಸಮಾರಂಭದಲ್ಲಿ ತಾಲೂಕು ಚುಸಾಪ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಕಲಾಪ್ರೀಯಾ, ಸಹಕಾರ್ಯದರ್ಶಿಗಳಾದ ಮಂಜುನಾಥ ತಾವರಗಿ, ಸಾಹಿತಿಗಳಾದ ಎಮ್ ಎಸ್ ನಾರಾಯಣ್, ಸೋಮಶೇಖರ ಕಂಚಿ, ಬಸವರಾಜ ದಂಪತಿಗಳು ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















