
ಸಾರ್ವಜನಿಕರು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು : ತಹಶೀಲ್ದಾರ್ ಜೂಗಲ ಮಂಜು ನಾಯಕ್ ಎಚ್ಚರಿಕೆ
ಬಳ್ಳಾರಿ / ಕಂಪ್ಲಿ : ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಕೈಬಿಡಲು ಚುನಾವಣಾ ಆಯೋಗದ ‘ಫಾರ್ಮ್ 7’ (Form 7) ಅರ್ಜಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕಂಪ್ಲಿ ಹಾಗೂ ಕೋಟೆ ಭಾಗದ ಯುವಕರು ಮತ್ತು ಸಾರ್ವಜನಿಕರು ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಬಳಸಿಕೊಂಡು, ಕಂಪ್ಲಿ ಕೋಟೆಯ ಹಾಗೂ ವಿವಿಧ ವಿವಿಧ ವಾರ್ಡ್‌ಗಳಲ್ಲಿ ಮುಸ್ಲಿಂ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ. ಮುಸ್ಲಿಂ ಮತದಾರರ ಮೇಲೆ ಒತ್ತಡ ಹೇರಿ, ಅವರ ಅನುಮತಿಯಿಲ್ಲದೆ ಫಾರ್ಮ್ 7 ರ ಅಡಿಯಲ್ಲಿ ಆಕ್ಷೇಪಣೆ ಅರ್ಜಿಗಳನ್ನು ಸಲ್ಲಿಕೆ ಮಾಡಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಕೆಲವರು ರಾಜಕೀಯ ಪ್ರಭಾವ ಬಳಸಿ ಈ ಅಕ್ರಮ ಎಸಗುತ್ತಿದ್ದಾರೆ ಎಂದು ಆರೋಪಿಸಿದ ಆಕ್ರೋಶಿತ ಯುವಕರ ತಂಡವು, ಕಂಪ್ಲಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿತು. ಸ್ಥಳದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಯುವಕರು, “ಯಾವುದೇ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಬಾರದು. ಯಾರದ್ದೋ ಒತ್ತಡಕ್ಕೆ ಮಣಿದು ಅರ್ಜಿಗಳನ್ನು ಅಂಗೀಕರಿಸಿದರೆ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಕಾನೂನುಬಾಹಿರವಾಗಿ ಯಾವುದೇ ಹೆಸರುಗಳನ್ನು ತೆಗೆದುಹಾಕುವುದಿಲ್ಲ ಹಾಗೂ ನಿಯಮಾನುಸಾರ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
ತಹಶೀಲ್ದಾರ್ ಪ್ರತಿಕ್ರಿಯೆ :
“ನಿಮ್ಮ ಬಳಿ ಹರಿದಾಡುತ್ತಿರುವ ಅರ್ಜಿಗಳು ನಮ್ಮ ಅಧಿಕೃತ ದಾಖಲೆಗಳಲ್ಲ. ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ನಿಗದಿತ ಕಾನೂನು ಪ್ರಕ್ರಿಯೆ ಇದೆ. ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡದೇ ಮತದಾರರ ಹೆಸರನ್ನು ಅಳಿಸುವ ಪ್ರಶ್ನೆಯೇ ಇಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು.”
ಅಲ್ಲದೆ, SIR ಪ್ರಕ್ರಿಯೆ ಕುರಿತು ಸುಳ್ಳು ಮಾಹಿತಿ ಹರಡುವುದು ಅಥವಾ ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂಪ್ಲಿ ತಹಶೀಲ್ದಾರ್ ಜೂಗಲ್ ಮಂಜು ನಾಯಕ್ ಎಚ್ಚರಿಕೆ ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















