ಬಳ್ಳಾರಿ / ಕಂಪ್ಲಿ : ತಾಲೂಕಿನಾದ್ಯಂತ ದಿನಾಂಕ 05, 06 ಮತ್ತು 07 ರಂದು ಆಯೋಜಿಸಲಾಗಿರುವ ‘ಸೇವಾ ಸೇತು’ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪಿ.ಎಂ. ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ” ಅಡಿಯಲ್ಲಿ ಸೋಲಾರ್ ರೂಫ್ಟಾಪ್ (ಮೇಲ್ಛಾವಣಿ ಸೌರ ವಿದ್ಯುತ್ ಘಟಕ) ಅಳವಡಿಕೆಗೆ ಸ್ಥಳದಲ್ಲೇ ನೋಂದಣಿ ಪ್ರಕ್ರಿಯೆ ಮತ್ತು ಮಾರ್ಗದರ್ಶನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪಿಸುವುದರಿಂದ ಮಾಸಿಕ ವಿದ್ಯುತ್ ಬಿಲ್ ಗಣನೀಯವಾಗಿ ಕಡಿತಗೊಂಡು, ಬಹುತೇಕ ಶೂನ್ಯ ಬಿಲ್ ಪಡೆಯುವ ಅವಕಾಶವಿರುತ್ತದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ (DBT) ಸಬ್ಸಿಡಿ ಜಮೆಯಾಗಲಿದೆ.
1 ಕಿಲೋವ್ಯಾಟ್ ಘಟಕಕ್ಕೆ ₹30,000, 2 ಕಿಲೋವ್ಯಾಟ್ಗೆ ₹60,000 ಹಾಗೂ 3 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ಘಟಕಕ್ಕೆ ಗರಿಷ್ಠ ₹78,000 ವರೆಗೆ ಸಬ್ಸಿಡಿ ಸಿಗಲಿದೆ.
ಉತ್ಪಾದನೆಯಾದ ವಿದ್ಯುತ್ ಸ್ವಂತ ಬಳಕೆಯ ನಂತರ ಉಳಿದಲ್ಲಿ, ಅದನ್ನು ನೆಟ್ ಮೀಟರ್ ಮೂಲಕ ಗ್ರಿಡ್ಗೆ ಸರಬರಾಜು ಮಾಡಿ ಹೆಚ್ಚುವರಿ ಆದಾಯವನ್ನೂ ಗಳಿಸಬಹುದು. ಸೋಲಾರ್ ಘಟಕ ಅಳವಡಿಕೆಗೆ ರಾಷ್ಟ್ರೀಕೃತ ಬ್ಯಾಂಕ್ಗಳಿಂದ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ಲಭ್ಯವಿದೆ.
ನೋಂದಣಿಗೆ ಇತ್ತೀಚಿನ ವಿದ್ಯುತ್ ಬಿಲ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ಹಾಗೂ ಮೇಲ್ಛಾವಣಿಯ ಹಕ್ಕಿನ ದಾಖಲೆ/ಕಂದಾಯ ರಸೀದಿಯನ್ನು ತರಬೇಕು. ಕಂಪ್ಲಿ ಉಪ-ವಿಭಾಗದ ಸಮಸ್ತ ವಿದ್ಯುತ್ ಗ್ರಾಹಕರು ಈ 3 ದಿನಗಳ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9449597416 ಅನ್ನು ಸಂಪರ್ಕಿಸಬಹುದು ಎಂದು ಜೆಸ್ಕಾಂ ಕೋರಿದೆ.
ವರದಿ : ಜಿಲಾನಸಾಬ್ ಬಡಿಗೇರ್




















