ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಂದು ಮಾವಿನ ಹಣ್ಣು – ಮೂವರ ಹುಟ್ಟು!

ಜಾನಪದ ಕಥೆ

​ಪಶ್ಚಿಮ ದಿಕ್ಕಿನ ಒರಂಗಲ್ಲು ಪಟ್ಟಣದ ರಾಜ ವೀರ ಬಲ್ಲಾಳ ಎಂಬ ರಾಜ ಆಳ್ವಿಕೆ ಮಾಡುತ್ತಿದ್ದನು ಈ ಅರಸನಿಗೆ ಮದುವೆಯಾಗಿ 12 ವರ್ಷಗಳಾದರೂ ಮಕ್ಕಳಿರಲಿಲ್ಲ. ಮಕ್ಕಳ ಭಾಗ್ಯಕ್ಕಾಗಿ ರಾಜ-ರಾಣಿ ಅನೇಕ ಪೂಜೆ-ಪುನಸ್ಕಾರಗಳನ್ನು ಮಾಡಿದರು ಅನೇಕ ದೇವಾಲಯಗಳಿಗೆ ಹರಕೆ ಹೊತ್ತುಕೊಂಡರು ಹೀಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದರು, ಆದರೂ ಫಲ ಸಿಗಲಿಲ್ಲ. ಒಮ್ಮೆ ಅರಮನೆಗೆ ಓಮ್ಮೆ ಸಂತರೊಬ್ಬರು ಆಗಮಿಸಿ, ಮಹಾರಾಣಿಗೆ ಒಂದು ಮಾವಿನ ಹಣ್ಣನ್ನು ನೀಡಿ, ” ಈ ಹಣ್ಣನ್ನು ನೀನು ತಿಂದರೆ ನಿನಗೆ ಸಂತಾನ ಭಾಗ್ಯ ಲಭಿಸುತ್ತದೆ ” ಎಂದು ಹಾರೈಸಿ ಹೊರಟು ಹೋದರು.
​ಮಹಾರಾಣಿಯು ಸಂತರು ನೀಡಿದ ಮಾವಿನ ಹಣ್ಣಿನ ತಿರುಳನ್ನು ತಿಂದ ನಂತರ, ಅದರ ಸಿಪ್ಪೆ ಮತ್ತು ಬೀಜವನ್ನು ಅರಮನೆಯ ತಮ್ಮ ಕೋಣೆಯಲ್ಲಿ ಇಟ್ಟಿದ್ದಳು.
ಅರಮನೆಯ ಸೇವಕಿಯಾಗಿದ್ದ ಮಾದಿಗರ ಮಹದೇವಮ್ಮ ರಾಣಿಯ ಕೋಣೆಯನ್ನು ಸ್ವಚ್ಚಗೊಳಿಸುವಾಗ ಆಸೆಯಿಂದ ಮಾವಿನ ಸಿಪ್ಪೆಯನ್ನು ತಿಂದಳು. ಮಾವಿನ ಬೀಜವನ್ನು ಕಸದ ಬುಟ್ಟಿಗೆ ಹಾಕಿದಳು. ಸಂಜೆಯ ವೇಳೆ ಅದನ್ನು ತಿಪ್ಪೆಗೆ ಎಸೆಯಲಾಯಿತು. ಅಂದು ಬಿದ್ದ ಭಾರಿ ಮಳೆಗೆ ಕಸದ ಜೊತೆ ಆ ಬೀಜವೂ ಕೊಚ್ಚಿಕೊಂಡು ಹೋಗಿ ನದಿಯ ದಡ ಸೇರಿತು.
​ಅದೇ ಊರಿನ ಮಡಿವಾಳ ಮಾಚಯ್ಯ ಬಟ್ಟೆ ಒಗೆಯಲು ತನ್ನ ಕತ್ತೆಯ ಮೇಲೆ ಬಟ್ಟೆಗಳನ್ನು ಹೇರಿಕೊಂಡು ನದಿಯ ದಡಕ್ಕೆ ಎಂದನಂತೆ ತನ್ನ ಕಾಯಕ ಮಾಡಲು ತೆರಳಿದ. ಮಾಚಯ್ಯ ತನ್ನ ಕಾಯಕದ ನಡುವೆ ಕತ್ತೆ ಮೇಯುಲು ಬಿಟ್ಟನು ಆಕಸ್ಮಿಕವಾಗಿ ದಡದಲ್ಲಿದ್ದ ಮಾವಿನ ಬೀಜವನ್ನು ಕತ್ತೆ ನುಂಗಿಬಿಟ್ಟಿತು.
​ಕಾಲಕ್ರಮೇಣ, ಮಾವಿನ ಹಣ್ಣು ತಿಂದ ಮಹಾರಾಣಿಗೆ ಸುಂದರ ಹೆಣ್ಣು ಮಗು ಜನಿಸಿತು. ಅವಳಿಗೆ ಕಮಲಾಕ್ಷಿ ಎಂದು ಹೆಸರಿಡಲಾಯಿತು. ಹಣ್ಣಿನ ಸಿಪ್ಪೆ ತಿಂದ ಸೇವಕಿ ಮಹದೇವಮ್ಮನಿಗೂ ಒಬ್ಬ ಗಂಡು ಮಗು ಜನಿಸಿದನು, ಅವನಿಗೆ ಹಂಪಣ್ಣ ಎಂದು ನಾಮಕರಣ ಮಾಡಲಾಯಿತು. ಇತ್ತ ಮಾವಿನ ಬೀಜವನ್ನು ನುಂಗಿದ್ದ ಕತ್ತೆಯ ಹೊಟ್ಟೆಯಲ್ಲಿ ಒಂದು ಅದ್ಭುತ ಕುದುರೆ ಮರಿ ಜನಿಸಿತು! ಆ ಕುದುರೆಯ ಕತ್ತು ಮಾವಿನ ಬೀಜದ ಆಕೃತಿಯಲ್ಲಿದೆ ಎಂಬುದು ಜನಪದರ ನಂಬಿಕೆ.
​ಮುಂದೆ ಒರಂಗಲ್ಲು ಪಟ್ಟಣದ ಮಡಿವಾಳ ಮಾಚಯ್ಯ ರಾಜಪರಿವಾರದ ವಸ್ತ್ರಗಳನ್ನು ತೊಳೆಯಲು ತೆರಳುವಾಗ, ಆ ಕತ್ತೆಯ ಹೊಟ್ಟೆಯಲ್ಲಿ ಜನಿಸಿದ ವಿಸ್ಮಯ ಸಣ್ಣ ಕುದುರೆ ಮರಿಯೂ ಜೊತೆಯಲ್ಲಿ ಹೋಗುತ್ತಿತ್ತು. ಇದನ್ನು ನೋಡಿದ ರಾಜಕುಮಾರಿ ಕಮಲಾಕ್ಷಿಗೆ ಆ ಕುದುರೆ ಮರಿಯ ಮೇಲೆ ಅಪಾರ ಪ್ರೀತಿ ಮೂಡಿತು. ತನ್ನ ತಂದೆಗೆ ತಿಳಿಸಿ ಮಡಿವಾಳ ಮಾಚಯ್ಯನಿಂದ ಆ ಕುದುರೆಯನ್ನು ಪಡೆದುಕೊಂಡಳು. ಕುದುರೆಯೊಡನೆ ಯುವರಾಣಿ ಕಮಲಾಕ್ಷಿಗೆ ಭಾವನಾತ್ಮಕ ಬಂಧ ಬೆಳೆಯಿತು.ಅದರ ಪ್ರತಿಯೊಂದು ಪಾಲನೆ-ಪೋಷಣೆಯನ್ನು ನಿತ್ಯ ಆಕೆಯೇ ಸ್ವತಃ ಮಾಡುತ್ತಿದ್ದಳು.
​ಕಮಲಾಕ್ಷಿ ಮದುವೆಯ ವಯಸ್ಸಿಗೆ ಬಂದಾಗ, ಮಹಾರಾಜ ವೀರಬಲ್ಲಾಳನು ಮಗಳಿಗೆ ಸ್ವಯಂವರವನ್ನು ಏರ್ಪಡಿಸಿದನು.ಆದರೆ ಕಮಲಾಕ್ಷಿ ಒಂದು ಷರತ್ತು ವಿಧಿಸಿದಳು! “ಯಾರು ನನ್ನ ಕುದುರೆಯನ್ನು ಸವಾರಿ ಮಾಡುತ್ತಾರೋ, ಅವರನ್ನಷ್ಟೇ ನಾನು ವರಿಸುತ್ತೇನೆ ” ಎಂದಳು. ಮಹಾರಾಜನು ಈ ವಿಷಯವನ್ನು ಊರೆಲ್ಲಾ ಡಂಗುರ ಸಾರಿಸಿದನು. ಸ್ವಯಂವರಕ್ಕೆ ಬಂದ ಸುಮಾರು 15 ಜನ ಪ್ರಖ್ಯಾತ ಪೈಲ್ವಾನರು ಮತ್ತು ಬೇರೆ ಬೇರೆ ನಾಡಿನ ಯುವರಾಜರು ಆ ಕುದುರೆ ಸವಾರಿ ಮಾಡಲು ಓರಂಗಲ್ಲು ಪಟ್ಟಣಕ್ಕೆ ನಾ ಮುಂದು ತಾ ಮುಂದು ಎಂದು ಆಗಮಿಸಿದರು ಕುದುರೆಯನ್ನು ಯಾರೂ ಕೂಡ ಸವಾರಿ ಇರಲಿ ಸ್ಪರ್ಶ ಮಾಡಲು ಸಾಧ್ಯವಾಗಲಿಲ್ಲ ಇದರಿಂದ ಕುದುರೆ ಏರಲಾಗದೆ ಹೋಗಿದ್ದ ಆಕಾಂಕ್ಷಿಗಳು ಹತಾಶರಾದರು. ಏಕೆಂದರೆ, ಆ ಕುದುರೆಯು ಕಮಲಾಕ್ಷಿಯನ್ನು ಹೊರತುಪಡಿಸಿ ಬೇರಾರನ್ನೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ.
ಯುವರಾಣಿಯನ್ನು ಪಡೆಯಲು ಏನೆಲ್ಲಾ ಪ್ರಯತ್ನ ಮಾಡಿದರು ಯಾರಿಂದಲೂ ಕುದುರೆ ಸವಾರಿ ಮಾಡಲು ಸಾಧ್ಯವಾಗಲಿಲ್ಲ ಈ ವಿಷಯ ಜಗಜ್ಜಾಹೀರಾಯಿತು.
​ಪಕ್ಕದ ಊರಿನ ಅರಸಗೇರಿಯ ಅರಿಯಲ ದೇವಿಯ ಮಗ ಚನ್ನಿಗರಾಯನಿಗೆ ಈ ವಿಷಯ ತಿಳಿದು ತನ್ನ ತಾಯಿಯ ಬಳಿ ಹೋಗಿ, “ನಾನು ಸ್ವಯಂವರದಲ್ಲಿ ಭಾಗವಹಿಸಿ ಕುದುರೆ ಸವಾರಿ ಮಾಡಿ ಕಮಲಾಕ್ಷಿಯನ್ನು ಮದುವೆಯಾಗುತ್ತೇನೆ” ಎಂದು ಕೇಳಿಕೊಂಡನು. ತಾಯಿ ಅರಿಯಲದೇವಿ, “ಬೇಡ ಮಗನೇ, ದೊಡ್ಡ ದೊಡ್ಡ ಪೈಲ್ವಾನರು,ಯುವರಾಜರೇ ಸೋತು ತಣ್ಣಗಾಗಿದ್ದಾರೆ, ನಿನ್ನಿಂದ ಅದು ಸಾಧ್ಯವಿಲ್ಲ” ಎಂದು ಎಷ್ಟೇ ತಿಳಿಹೇಳಿದರೂ ಚನ್ನಿಗರಾಯ ಕೇಳಲಿಲ್ಲ. ಕೊನೆಗೆ ತಾಯಿ ಪಕ್ಕದ ಮನೆಯ ಮಹದೇವಮ್ಮನ ಮಗ ಹಂಪಣ್ಣನ ಬಳಿ ತನ್ನ ಮಗನ ಬಯಕೆಯನ್ನು ತಿಳಿಸಿದಳು, ಅದಕ್ಕೆ ಗೆಳೆಯನಿಗೆ ಸಹಾಯ ಮಾಡಲು ಹಂಪಣ್ಣ ಮುಂದಾದನು, ಮರುದಿನ ಗೆಳೆಯರಿಬ್ಬರು
​ಓರಂಗಲ್ಲು ಪಟ್ಟಣ ಕಡೆ ತೆರಳಿದರು, ಚನ್ನಿಗರಾಯ ಮತ್ತು ಹಂಪಣ್ಣ ಸ್ವಯಂವರ ಮಂಟಪವನ್ನು ತಲುಪಿ ಕುದುರೆ ಸವಾರಿಗೆ ಅನುಮತಿ ಕೋರಿದರು. ಕಮಲಾಕ್ಷಿಯೂ ಅದಕ್ಕೆ ಸಮ್ಮತಿಸಿದಳು. ಮೊದಲು ಚನ್ನಿಗರಾಯ ಕುದುರೆ ಏರಲು ಪ್ರಯತ್ನಿಸಿದಾಗ ಅವನಿಂದ ಸಾಧ್ಯವಾಗಲಿಲ್ಲ. ಗೆಳೆಯನ ಮರ್ಯಾದೆ ಹೋಗುತ್ತದೆ ಎಂದು, ಹಂಪಣ್ಣನು ಧೈರ್ಯದಿಂದ ಕುದುರೆಯನ್ನೇರಿ, ತನ್ನ ಮುಂದೆ ಚನ್ನಿಗರಾಯನನ್ನು ಕೂರಿಸಿಕೊಂಡು ಯಶಸ್ವಿಯಾಗಿ ಸವಾರಿ ಮಾಡಿದನು! ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು.
​ಆದರೆ ಚಾಣಾಕ್ಷೆ ಕಮಲಾಕ್ಷಿಯು, “ಕುದುರೆಯನ್ನು ಸವಾರಿ ಮಾಡಿದ್ದು ಚನ್ನಿಗರಾಯನಲ್ಲ, ಹಂಪಣ್ಣ!” ಎಂದು ಗುರುತಿಸಿ, ಹಂಪಣ್ಣನನ್ನೇ ಮದುವೆಯಾಗಲು ಒಪ್ಪಿದಳು.ಮದುವೆಯ ಸಿದ್ಧತೆಗಳು ಬಿರುಸಿನಿಂದ ಸಾಗಿದವು.
​ಮದುವೆಯ ಹಿಂದಿನ ದಿನ, ಅಂದು ಮಾವಿನ ಹಣ್ಣನ್ನು ನೀಡಿದ್ದ ಸಂತರು ಪ್ರತ್ಯಕ್ಷರಾಗಿ ಹೀಗೆ ಹೇಳಿದರು
​”ಈ ಮದುವೆ ನಡೆಯಲು ಸಾಧ್ಯವಿಲ್ಲ. ನಾನು 15 ವರ್ಷಗಳ ಹಿಂದೆ ನಾನು ಇಲ್ಲಿಗೆ ಮಹಾರಾಣಿಯವರಿಗೆ ಒಂದು ಮಾವಿನ ಹಣ್ಣನ್ನು ನೀಡಿದ್ದೆ. ಮಾವಿನ ಹಣ್ಣಿನ ತಿರುಳು ತಿಂದ ಮಹಾರಾಣಿಗೆ ಕಮಲಾಕ್ಷಿ ಹುಟ್ಟಿದಳು,ಅದರ ಸಿಪ್ಪೆ ತಿಂದ ಸೇವಕಿ ಮಹದೇವಮ್ಮನಿಗೆ ಹಂಪಣ್ಣ ಹುಟ್ಟಿದನು, ಮತ್ತು ಅದರ ಬೀಜ ನುಂಗಿದ ಕತ್ತೆಗೆ ಕುದುರೆ ಜನಿಸಿತು. ಹಾಗಾಗಿ ಕಮಲಾಕ್ಷಿ, ಹಂಪಣ್ಣ ಮತ್ತು ಕುದುರೆ ಮೂವರೂ ಒಂದೇ ಮಾವಿನ ಹಣ್ಣಿನಿಂದ ಜನಿಸಿದವರು. ಈ ಸಂಬಂಧದಲ್ಲಿ ಹಂಪಣ್ಣ ಮತ್ತು ಕಮಲಾಕ್ಷಿ ಅಣ್ಣ-ತಂಗಿಯರಾಗುತ್ತಾರೆ!”
​ಸಂತರ ಈ ಮಾತನ್ನು ಕೇಳಿ ಬೆಚ್ಚಿಬಿದ್ದ ಕಮಲಾಕ್ಷಿ ಮತ್ತು ರಾಜಪರಿವಾರದವರು,ಕೊನೆಗೆ ಧರ್ಮಶಾಸ್ತ್ರ ಮತ್ತು ಪುರೋಹಿತರ ಮಾತಿನಂತೆ ಹಂಪಣ್ಣನ ಬದಲಾಗಿ ಚನ್ನಿಗರಾಯನನ್ನೇ ಮದುವೆಯಾಗಲು ನಿಶ್ಚಯಿಸುತ್ತಾರೆ.
ಇದು ಒಂದು ಮಾವಿನ ಹಣ್ಣು ತಿಂದು ಮೂವರು ಜನಿಸಿದ ಜನಪದ ಕತೆಯಾಗಿದೆ.

​ಸಂಗ್ರಹ: ಡಾ. ಸುರೇಶ್ ಎಸ್. ವಡಗಲಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!