ಬಾಗಲಕೋಟೆ: ಪ್ರವಾಸದ ಅನುಭವ, ನಿಸರ್ಗ, ಇತಿಹಾಸ, ಸಂಸ್ಕೃತಿ ಹಾಗೂ ಜನಜೀವನವನ್ನು ಅಕ್ಷರರೂಪದಲ್ಲಿ ಕಟ್ಟಿಕೊಟ್ಟಿರುವ ನಗರದ ಸಾಹಿತಿ ಪ್ರಕಾಶ ಖಾಡೆ ಅವರ ‘ಲೋಕದ ಸುತ್ತಾಟ : ಲಂಡನ್’ ಪ್ರವಾಸ ಕಥನ ಕೃತಿ ಅ.8 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಅನಿವಾಸಿ ಭಾರತೀಯರ ಸಮ್ಮೇಳನದಲ್ಲಿ ಲೋಕಾರ್ಪಣೆಯಾಗಲಿದೆ.
2026ರ ಆಗಸ್ಟ್ನಲ್ಲಿ ಯುಕೆ ಹಾಗೂ ಯುರೋಪ್ ಪ್ರವಾಸ ಕೈಗೊಂಡಿದ್ದ ಪ್ರಕಾಶ ಖಾಡೆ ಅವರು ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ನೆದರ್ಲ್ಯಾಂಡ್ಸ್, ಸ್ವಿಟ್ಜರ್ಲ್ಯಾಂಡ್, ಲಕ್ಸೆಂಬರ್ಗ್, ಆಸ್ಟ್ರಿಯಾ ಹಾಗೂ ಇಟಲಿ ಸೇರಿದಂತೆ ವಿವಿಧ ದೇಶಗಳ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ವೈವಿಧ್ಯಮಯ ಭೌಗೋಳಿಕ ಪರಿಸರ, ನಿಸರ್ಗ ಸೌಂದರ್ಯ, ಐತಿಹಾಸಿಕ ಮಹತ್ವ, ಸಂಸ್ಕೃತಿ ಹಾಗೂ ಜನಜೀವನವನ್ನು ಹತ್ತಿರದಿಂದ ಕಂಡ ಅನುಭವವನ್ನು ಪ್ರವಾಸ ಕಥನದ ಮೂಲಕ ದಾಖಲಿಸಿದ್ದಾರೆ.
ಸೆ.2ರಂದು ಪ್ರವಾಸದಿಂದ ಸ್ವಗ್ರಾಮಕ್ಕೆ ಮರಳಿದ ಬಳಿಕ ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಅವರು, ಕೇವಲ ಒಂದು ತಿಂಗಳ ಅವಧಿಯಲ್ಲಿ ಪ್ರವಾಸದ ಅನುಭವಗಳನ್ನು ಕೃತಿಯ ರೂಪಕ್ಕೆ ತಂದು ಮುದ್ರಣದ ಹಂತಕ್ಕೆ ತಂದಿದ್ದಾರೆ.
‘ಲೋಕದ ಸುತ್ತಾಟ’ ಎಂಬ ಮುಖ್ಯ ಶೀರ್ಷಿಕೆಯಡಿ ಒಟ್ಟು ನಾಲ್ಕು ಪ್ರವಾಸ ಕಥನ ಕೃತಿಗಳು ಹೊರಬರಲಿದ್ದು, ಅದರ ಮೊದಲ ಕಂತಾಗಿ ‘ಲೋಕದ ಸುತ್ತಾಟ : ಲಂಡನ್’ ಕೃತಿ ಪ್ರಕಟವಾಗುತ್ತಿದೆ.
ಅ.8ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಅನಿವಾಸಿ ಭಾರತೀಯರ ಸಮ್ಮೇಳನದಲ್ಲಿ ಕೃತಿ ಲೋಕಾರ್ಪಣೆಗೊಳ್ಳಲಿದೆ. ಹೃದಯ ವಾಹಿನಿ ಸಂಸ್ಥೆ, ಮಂಗಳೂರು ಇದರ ಆಶ್ರಯದಲ್ಲಿ ಹಾಗೂ ಇಂ. ಮಂಜುನಾಥ ಸಾಗರ ಅವರ ಆಯೋಜನೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ತಮ್ಮ ಕೃತಿ ಲೋಕಾರ್ಪಣೆಯ ಸಂದರ್ಭದಲ್ಲಿ ಸಾಹಿತ್ಯಾಸಕ್ತರು, ಸ್ನೇಹಿತರು ಹಾಗೂ ಓದುಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸುವಂತೆ ಪ್ರಕಾಶ ಖಾಡೆ ಮನವಿ ಮಾಡಿದ್ದಾರೆ.
ತಮ್ಮ ಆಗಮನ, ಶುಭಹಾರೈಕೆ ಹಾಗೂ ಪ್ರೀತಿಯ ಬೆಂಬಲವು ಮುಂದಿನ ಬರವಣಿಗೆಯ ಪಯಣಕ್ಕೆ ಮತ್ತಷ್ಟು ಪ್ರೇರಣೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















