ಬಳ್ಳಾರಿ / ಕಂಪ್ಲಿ : ಕಳೆದ ಹಿಂಗಾರು ಹಂಗಾಮಿನಲ್ಲಿ ಸರ್ಕಾರ ಖರೀದಿಸಿದ್ದ ಜೋಳ ಮತ್ತು ರಾಗಿಯ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ಇನ್ನು ರೈತರ ಖಾತೆಗೆ ಜಮೆ ಮಾಡದಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಇಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ, “ಜೋಳ ಮತ್ತು ರಾಗಿ ಖರೀದಿಗಾಗಿ ಕೇಂದ್ರ ಸರ್ಕಾರವು ₹406.84 ಕೋಟಿ ಹಣವನ್ನು 15 ದಿನಗಳ ಹಿಂದೆಯೇ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನದಿಂದಾಗಿ ರೈತರು ಇನ್ನೂ ತಮ್ಮ ಕಷ್ಟದ ದುಡಿಮೆಯ ಹಣಕ್ಕಾಗಿ ಕಾಯುವಂತಾಗಿದೆ” ಎಂದು ಆರೋಪಿಸಿದರು.
ಹಣ ಬಿಡುಗಡೆಗೆ ಆಗ್ರಹಿಸಿ ರೈತ ಸಂಘಟನೆಯ ಮುಖಂಡರು ಆಹಾರ ಇಲಾಖೆಯ ಡಿಜಿಎಂ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿ ಗಮನ ಸೆಳೆದಿದ್ದಾರೆ. ಮನವಿ ಸ್ವೀಕರಿಸಿದ ಅಧಿಕಾರಿಗಳು, ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮುಂದಿನ 10 ದಿನಗಳ ಒಳಗಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಅಧಿಕಾರಿಗಳು ನೀಡಿದ ಭರವಸೆಯಂತೆ 10 ದಿನಗಳಲ್ಲಿ ರೈತರ ಖಾತೆಗೆ ಹಣ ತಲುಪದಿದ್ದರೆ, ರಾಜ್ಯ ಸರ್ಕಾರ ಮತ್ತು ಆಹಾರ ಇಲಾಖೆಯ ವಿರುದ್ಧ ರಾಜ್ಯಾದ್ಯಂತ ಹಂತ ಹಂತವಾಗಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿ.ವಿ. ಗೌಡ ಇದೇ ವೇಳೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಹನುಮಂತಪ್ಪ ಹೊಳೆಯಾಚೆ, ಮಲ್ಲನಗೌಡ ಪಾಟೀಲ, ಬಸವರಾಜ ಗೋಡೆಹಾಳ, ಉಮಾದೇವಿ ನಾಯಕ, ದೇವಕಿ ನಾಯಕ, ಮರಿಲಿಂಗ ಪಾಟೀಲ್ ಹಾಗೂ ಮಲ್ಲೇಶ್ ನಾಯಕ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















