ಮಡಿಕೇರಿ ದಸರಾ ಹಿನ್ನೆಲೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಗುರುವಾರ ನಗರದ ಗಾಂಧಿ ಮೈದಾನಕ್ಕೆ ಭೇಟಿ ನೀಡಿ ದಸರಾ ಕಾರ್ಯಕ್ರಮಗಳ ಸಿದ್ಧತೆ ಪರಿಶೀಲಿಸಿದರು.
ದಸರಾ ಕಾರ್ಯಕ್ರಮವನ್ನು ಯಾವುದೇ ಲೋಪವಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಧಿಕಾರಿಗಳು ಹಾಗೂ ದಸರಾ ಸಮಿತಿಯ ಪದಾಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ವೇದಿಕೆ ನಿರ್ಮಾಣದ ಕುರಿತು ದಸರಾ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಅವರಿಂದ ಶಾಸಕರು ಮಾಹಿತಿ ಪಡೆದರು.
ಆಯುಧ ಪೂಜೆಯಂದು ಹೆಸರಾಂತ ಗಾಯಕ ವಾಸುಕಿ ವೈಭವ್ ಹಾಗೂ ಅನನ್ಯ ಭಟ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಅಕ್ಟೋಬರ್ 13 ಮತ್ತು 14 ರಂದು ಕಾಫಿ ದಸರಾ: ಕಾಫಿ ದಸರಾ ಸಂಚಾಲಕ ಅನಿಲ್ ಎಚ್.ಟಿ. ಅವರು ಕಾಫಿ ದಸರಾ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.
ಕಾಫಿ ದಸರಾದಲ್ಲಿ 54 ಮಳಿಗೆಗಳಲ್ಲಿ ಕಾಫಿಗೆ ಸಂಬಂಧಿಸಿದ ಮಾಹಿತಿ, ವಿವಿಧ ಉತ್ಪನ್ನಗಳು ಹಾಗೂ ಕಾಫಿಯ ಸವಿಯ ಘಮಲು ಪ್ರವಾಸಿಗರು ಮತ್ತು ಸಾರ್ವಜನಿಕರನ್ನು ಆಕರ್ಷಿಸಿದೆ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಕೃಷಿಕರು ಹಾಗೂ ಸಾರ್ವಜನಿಕರು ಕಾಫಿ ದಸರಾಕ್ಕೆ ಭೇಟಿ ನೀಡಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ ಮಂತರ್ ಗೌಡ ಅವರು ಮನವಿ ಮಾಡಿದರು.
ಅ.17 ರಂದು ಶ್ವಾನ ಪ್ರದರ್ಶನ, ಅ.18 ರಂದು ಯುವ ದಸರಾ: ಯುವ ದಸರಾ ಕುರಿತು ಸಮಿತಿ ಅಧ್ಯಕ್ಷ ಕವನ್ ಅವರು ಮಾಹಿತಿ ನೀಡಿ ಅಕ್ಟೋಬರ್ 17 ರಂದು ಬೆಳಿಗ್ಗೆ ಶ್ವಾನ ಪ್ರದರ್ಶನ ಹಾಗೂ ಅಕ್ಟೋಬರ್ 18 ರಂದು ರಾತ್ರಿ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಬಿ.ವೈ., ದಸರಾ ಸಮಿತಿ ಖಜಾಂಚಿ ಸಬಿತಾ, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಪ್ರಿತುನ್ ಪೂವಣ್ಣ




















