ಕಾಸರಗೋಡು ಪಾಂಗೋಡು : ಕನ್ನಡ ಭಾಷಾ ಸಂಸ್ಕಾರದ ಉಳಿವು, ನಿರಂತರ ಆಸಕ್ತರನ್ನು ಸೇರಿಸಿ, ಅವಕಾಶ ಕಲ್ಪಿಸಿ ಕಾರ್ಯ ಯೋಜನೆಗಳನ್ನು ಆಯೋಜಿಸಿ ಅನುಷ್ಠಾನಗೊಳಿಸುವುದರಿಂದಲ್ಲದೆ, ಅವಕಾಶ ವಂಚಿತ ಕಾವ್ಯಾಸಕ್ತ, ಸಾಹಿತ್ಯಾಸಕ್ತ, ಸಂಸ್ಕೃತಿ ಪ್ರಿಯರನ್ನು ಒಗ್ಗೂಡಿಸಿ ಅವರನ್ನು ಮುನ್ನೆಲೆಗೆ ತರುವುದರಿಂದ ಮಾತ್ರ ಸಶಕ್ತ ಸಾಂಸ್ಕೃತಿಕ ಸಮಾಜ ನಿರ್ಮಾಣ ಸಾಧ್ಯ. ಈ ಪ್ರವಣತೆ ಕಾಸರಗೋಡು ದಸರಾ ಯೋಜನೆಯಲ್ಲಿ ಕಾಣುತ್ತಿದ್ದೇವೆ. ಇದರ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಅವರು ತಮ್ಮ ಸಂಸ್ಥೆಯಾದ ಕಾಸರಗೋಡು ಕನ್ನಡ ಭವನ ಮೂಲಕ ನಿರಂತರ ಇಂತಹ ಕಾರ್ಯಗಳನ್ನು ಮಾಡುವುದನ್ನು ಮನಗಂಡಿದ್ದೇನೆ, ಮತ್ತು ಮೂಕ ವಿಸ್ಮಿತನಾಗಿದ್ದೇನೆ ಆದುದರಿಂದಲೇ ಕನ್ನಡ ಭವನ ಆಯೋಜಿಸುವ ಕಾರ್ಯಕ್ರಮಗಳಿಗೆ ವಾಮನ್ ರಾವ್ ಬೇಕಲರು ಕರೆದಾಗ ಕಾಸರಗೋಡಿಗೆ ನಾವು ಬರುವುದು ಎಂದು ಚುಟುಕು ಯುಗಾಚಾರ್ಯ, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ. ಎಮ್. ಜಿ. ಆರ್. ಅರಸ್ ಅವರು ಹೇಳಿದರು. ಅವರು ಕಾಸರಗೋಡು ಕನ್ನಡ ಭವನ ಮತ್ತು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಸಂಯುಕ್ತವಾಗಿ ಕಳೆದ 2013 ರಿಂದ ಆಯೋಜಿಸುತ್ತಾ ಬರುತ್ತಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ “ಕಾರ್ಯಕ್ರಮ ಅಂಗವಾಗಿ ನಡೆದ “ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನ -2026.ರ ಉದ್ಘಾಟನೆ ಯನ್ನು ದೀಪ ಬೆಳಗಿಸಿ ಮಾತನಾಡಿದರು.
ದಿ. 18.10.2026 ರಂದು ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನದ “ದುರ್ಗಾo ಬಾ “ವೇದಿಕೆಯಲ್ಲಿ ಕಾರ್ಯಕ್ರಮ ನಡೆದಿತ್ತು.
ಸರಕಾರ ಆಯೋಜಿಸುವ ಕಾರ್ಯಕ್ರಮದಂತೆ ಅಚ್ಚುಕಟ್ಟಾಗಿ ಸುಮಾರು 60 ಅಂತರ್ ರಾಜ್ಯ ಕವಿಗಳಿಗೆ “ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಾಧಕ ಪ್ರಶಸ್ತಿ ” 10 ಮಂದಿಗೆ “ನಾಡೋಜ ಡಾ. ಕಯ್ಯಾರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ” ನೀಡಿ ಕನ್ನಡ ಮೆರವಣಿಗೆಯೊಂದಿಗೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ಮಹಾಯೋಗ ಎಂದು ಕಾಸರಗೋಡು ದಸರಾ ರಾಷ್ಟ್ರೀಯ ಕವಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಬೆಂಗಳೂರಿನ ಶ್ರೀ ಬಿ. ಶ್ರೀನಿವಾಸ್ ಬಹದೂರ್ ಹೇಳಿದರು.
ಕೇರಳ ರಾಜ್ಯದಲ್ಲಿರುವ ಗಡಿನಾಡು ಕಾಸರಗೋಡಿನಲ್ಲಿ ಇಂತಹ ಅದ್ಭುತವಾದ ಕನ್ನಡ ಕಾರ್ಯಕ್ರಮಗಳು ನಮ್ಮ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಪೂರಕವಾಗಿ ನಡೆಯುವುದು ಅದರಲ್ಲೂ ಗಡಿನಾಡಿನಲ್ಲಿದ್ದು ಕೊಂಡು ಅಖಿಲ ಕರ್ನಾಟಕ ಮಟ್ಟದ ಸಾಹಿತಿ, ಕವಿಗಳನ್ನು ಆಹ್ವಾನಿಸಿ ರಾಷ್ಟ್ರೀಯ ಮಟ್ಟದಲ್ಲಿ ಸಾಹಿತ್ಯ ಪ್ರಿಯರನ್ನು ಒಗ್ಗೂಡಿಸುವ ವಾಮನ್ ರಾವ್ ಬೇಕಲ್ ಅವರನ್ನು ಕರ್ನಾಟಕ ಸರಕಾರ, ಇಲಾಖೆ, ಪ್ರಾಧಿಕಾರಗಳು ಗಮನಿಸಿ ಪುರಸ್ಕೃರಿಸಬೇಕಾಗಿದೆ ಎಂದು ರಾಷ್ಟ್ರೀಯ ಕವಿ ಗೋಷ್ಠಿ ಅಧ್ಯಕ್ಷತೆ ವಹಿಸಿದ ಖ್ಯಾತ ಕವಿ, ಸಾಹಿತಿ, ವಿಮರ್ಶಕ ಡಾ. ಜಯಪ್ಪ ಹೊನ್ನಾಳಿ (ಜಯಕವಿ ಮೈಸೂರು ) ಅಧ್ಯಕ್ಷ ಭಾಷಣದಲ್ಲಿ ಹೇಳಿದರು.
ಕನ್ನಡ ಮೆರವಣಿಗೆ ಉದ್ಘಾಟಿಸಿದ ಮೈಸೂರು ರಾಜ ವಂಶದ ಶ್ರೀ ಜೆ. ಪಿ. ಅರಸ್, ಇರಾ ನೇಮು ಪೂಜಾರಿ, ಡಾ. ಸುರೇಶ್ ನೆಗಳಗುಳಿ, ಡಾ. ಕೊಳಚಪ್ಪೆ ಗೋವಿಂದ ಭಟ್. ಕಥಾಬಿಂದು ಪ್ರದೀಪ್ ಕುಮಾರ್, ಶ್ರೀಮತಿ ಕವಯತ್ರಿ ಸೀತಾ ಲಕ್ಷ್ಮಿ ವರ್ಮ, ಗೊರೂರು ಪಂಕಜ, ರಾಜೇಶ್ ಕೋಟೆಕಣಿ, ಜಯಾನಂದ ಪೆರಾಜೆ, ಮುಂತಾದವರಿದ್ದರು. ಸಂಧ್ಯಾ ರಾಣಿ ಟೀಚರ್ ಸ್ವಾಗತಿಸಿ, ಗೊರೂರು ಪಂಕಜ, ನಿರ್ವಹಣೆ ನೆರವೇರಿಸಿದರು.
ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ವಂದಿಸಿದರು.




















