ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮಾನಸಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆದ ಪ್ರತಿಷ್ಠಿತ ಚಿಗುರು ಕವಿಗೋಷ್ಠಿಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಲಕ್ಕೂರು ಗ್ರಾಮದ ಬಾಲಕವಿ ತಾನೀಶ್ ಎನ್. ವಿಶೇಷ ಅತಿಥಿಯಾಗಿ (ಚಿಗುರು ಅತಿಥಿ) ಭಾಗವಹಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಾವೇ ಸ್ವತಃ ರಚಿಸಿದ ಅರ್ಥಗರ್ಭಿತ ಚುಟುಕುಗಳ ಮೂಲಕ ಈ ಪುಟಾಣಿ ಕವಿ ಸಾಹಿತ್ಯಾಸಕ್ತರ ಮನಗೆದ್ದಿದ್ದಾರೆ.
ಯುವಕವಿ ಲಕ್ಕೂರು ನಾಗರಾಜ್ ಹಾಗೂ ಶ್ವೇತಾಂಜಲಿ ಭರತನಾಟ್ಯ ಶಾಲೆ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ಸುಪುತ್ರನಾದ 8 ವರ್ಷದ ಬಾಲಕವಿ ತಾನೀಶ್, ಸಾಹಿತ್ಯ ಕೃಷಿಯಲ್ಲಿ ತೋರಿರುವ ಅದ್ಭುತ ಆಸಕ್ತಿ ಹಾಗೂ ಪ್ರತಿಭೆ ಇಡೀ ಕುಟುಂಬಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದೆ. ಪೋಷಕರ ನಿರಂತರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದಾಗಿ ಸಾಹಿತ್ಯ, ಶೈಕ್ಷಣಿಕ ಕ್ಷೇತ್ರ ಮತ್ತು ಸಾಂಸ್ಕೃತಿಕ ಕಲೆಗಳಲ್ಲಿ ಉನ್ನತ ಸಾಧನೆ ಮಾಡಿರುವ ತಾನೀಶ್, ಮೈಸೂರು ದಸರಾ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಈ ವೇದಿಕೆಯಲ್ಲಿ ವಿಶೇಷ ಗೌರವ ಪಡೆದ ಹೆಮ್ಮೆಯ ಸಾಧಕನಾಗಿದ್ದಾರೆ.
ಸಾಹಿತ್ಯ ವಲಯದಲ್ಲಿ ಮಿನುಗುತಾರೆ ಚುಟುಕು ಕವನ ಸಂಕಲನದ ಮೂಲಕ ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಈ ಬಾಲಪ್ರತಿಭೆ, ಚಿಗುರು ಕವಿಗೋಷ್ಠಿಯ ವೇದಿಕೆಯಲ್ಲೂ ಸಹ ಚುಟುಕಿನ ಮೂಲಕ ಸಮಾಜದ ಮೌಲ್ಯಗಳನ್ನು ಎತ್ತಿಹಿಡಿದರು. ತಾನೀಶ್ ಅವರ ಸಾಹಿತ್ಯಿಕ ಪರಿಣತಿ ಮತ್ತು ಅತಿ ಚಿಕ್ಕ ವಯಸ್ಸಿನಲ್ಲೇ ಚುಟುಕು/ಕಾವ್ಯ ರಚಿಸುವ ಮೂಲಕ ಸಾಧಿಸಿರುವ ಉನ್ನತ ಸಾಧನೆಯನ್ನು ಕಾರ್ಯಕ್ರಮದಲ್ಲಿದ್ದ ಹಿರಿಯ ಸಾಹಿತಿಗಳು, ಸಚಿವರು ಹಾಗೂ ಮುಖ್ಯ ಅತಿಥಿಗಳು ಮುಕ್ತಕಂಠದಿಂದ ಶ್ಲಾಘಿಸಿದರು. ಕಿರಿಯ ವಯಸ್ಸಿನಲ್ಲೇ ಅಸಾಧಾರಣ ಕಾವ್ಯ ರಚಿಸಿ ನಾಡಿನ ಗಮನ ಸೆಳೆದಿರುವ ತಾನೀಶ್ ಮುಂಬರುವ ದಿನಗಳಲ್ಲಿ ಸಾಹಿತ್ಯ ಲೋಕದ ದೊಡ್ಡ ಆಸ್ತಿಯಾಗಿ ಬೆಳಗಲಿದ್ದಾರೆ ಎಂದು ಗಣ್ಯರು ಆಶಿಸಿದ್ದಾರೆ.
ಇದೇ ವೇದಿಕೆಯಲ್ಲಿ ತಾನೀಶ್.ಎನ್ ಮಾತನಾಡುತ್ತಾ “ತಮ್ಮ ಸಾಹಿತ್ಯ ಸಾಧನೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ತನ್ನ ತಂದೆ ಲಕ್ಕೂರು ಎಂ ನಾಗರಾಜ್ ಹಾಗೂ ತಾಯಿ ಶ್ವೇತಾ ಅವರಿಗೆ ವೇದಿಕೆಯ ಮೇಲೆ ಕೃತಜ್ಞತೆ ಸಲ್ಲಿಸಿದರು. ತಾನು ಅಪ್ಪ-ಅಮ್ಮನ ಹೆಮ್ಮೆಯ ಮಗನಾಗಿ ಬೆಳೆದು, ಇಂತಹ ಉನ್ನತ ವೇದಿಕೆ ಏರಲು ಅವರ ಪ್ರೋತ್ಸಾಹವೇ ಕಾರಣ ಎಂದು ಸ್ಮರಿಸಿದರು. ಕನ್ನಡ ನಾಡಿನ ಬಗ್ಗೆ ಚುಟುಕು ವಾಚಿಸಿ, ಭಾಷಣ ಮಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪೌರಡಳಿತ ಸಚಿವರಾದ ಹೆಚ್.ಸಿ.ಬಾಲಕೃಷ್ಣ, ರಾಜ್ಯದ ಪ್ರಸಿದ್ದ ಮಕ್ಕಳ ಸಾಹಿತಿಗಳಾದ ಬಿಳಿಗೆರೆ ಕೃಷ್ಣಮೂರ್ತಿ, ಅಗ್ರಹಾರ ಕೃಷ್ಣಮೂರ್ತಿ, ಡಾ.ಕವಿತಾ ಕುಸುಗಲ್, ದಸರಾ ಕವಿಗೋಷ್ಠಿ ಉಪಸಮಿತಿ ಉಪವಿಶೇಷಾಧಿಕಾರಿ ಡಾ. ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ. ಎಂ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಎಂ.ಬಿ.ಆನಂದ, ತ್ರಿವೇಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




















