ಭದ್ರಾವತಿ:ಭದ್ರಾನದಿ ಮತ್ತು ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ನದಿ ಮತ್ತು ನಾಲೆ ಸುತ್ತಮುತ್ತ 100 ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.ಫೆ.26ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ನಿಷೇಧಾಜ್ಞೆ ವಿಧಿಸಿದ್ದು ಏಕೆ ?
ತುಂಗಭದ್ರಾ ನದಿ ಆಶ್ರಿತ ಕುಡಿಯುವ ನೀರಿನ ಯೋಜನೆಗಳಿಗೆ ಕುಡಿಯುವ ನೀರನ್ನು ಪೂರೈಸಲು ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ನದಿ ಮೂಲಕ ಫೆ.5ರಿಂದ ನೀರು ಹರಿಸಲಾಗುತ್ತಿದೆ. ಆದರೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕರೆ ಮಾಡಿ ನೀರು ತಲುಪಿಲ್ಲ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ತಿಳಿಸಿದ್ದಾರೆ.
ನದಿ ಪಾತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಹಾಕಿ ನೀರೆತ್ತಲಾಗುತ್ತಿದೆ.ಕೆಲವು ಕಡೆ ನದಿಗೆ ಅಡ್ಡಲಾಗಿ ಅನಧಿಕೃತವಾಗಿ ಮಣ್ಣಿನ ಏರಿ ನಿರ್ಮಿಸಿ ನೀರೆತ್ತಲಾಗುತ್ತಿದೆ.ಆದ್ದರಿಂದ ಹೊಳೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ.
ಜಿಲ್ಲಾಧಿಕಾರಿ ಆದೇಶದಲ್ಲಿ ಏನೇನಿದೆ ?
ನಿಬಂಧನೆಗಳು:
ನದಿ ಮತ್ತು ಕಾಲುವೆಗಳ ಪ್ರದೇಶದಲ್ಲಿ ಅನಧಿಕೃತವಾಗಿ ರೈತರು ಹೊಲಗಳಿಗೆ ನೀರನ್ನು ಹರಿಸುವುದಾಗಲೀ ಅಥವಾ ಪಂಪ್ ಸೆಟ್ ಮತ್ತು ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ನಿಷೇಧಿಸಿದೆ. ಐದು (05) ಮತ್ತು ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಬಂಧಿಸಿದೆ.ನಿಷೇಧಾಜ್ಞೆ ಸಮಯದಲ್ಲಿ ಶಸ್ತ್ರ,ಬಡಿಗೆ,ಬರ್ಜಿ,ಖಡ್ಗ,ಗದೆ,ಬಂದೂಕು,ಚೂರಿ,ಲಾಟಿ,ದೊಣ್ಣೆ,ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದಂತಹ ಯಾವುದೇ ಮಾರಕಸ್ತ್ರಗಳನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ನಿಷೇಧಿಸಿದೆ.ಕಲ್ಲುಗಳನ್ನು ಕ್ಷಾರಾಪದಾರ್ಥಳನ್ನ ಇಲ್ಲವೇ ಸ್ಫೋಟಕ ವಸ್ತುಗಳು,ಇತ್ಯಾದಿಗಳನ್ನು ತೆಗೆದುಕೊಂಡು ಹೋಗುವುದು ಹಾಗೂ ಶೇಖರಿಸುವುದನ್ನು ನಿಷೇಧಿಸಿದೆ.ಬಹಿರಂಗವಾಗಿ ಘೋಷಣೆಗಳನ್ನು ಕೂಗುವುದು.ಪದ ಹಾಡುವುದು,ವಾದ್ಯ ಬಾರಿಸುವುದು,ವ್ಯಾಖ್ಯಾನ ಮಾಡುವುದು,ಸನ್ನೆ ಅಥವಾ ನಕಲಿ ಪ್ರದರ್ಶನಗಳನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಿದೆ.ಯಾವುದೇ ವ್ಯಕ್ತಿ/ಸಾರ್ವಜನಿಕರಾಗಲಿ ಮೇಲೆ ವಿವರಿಸಿರುವ ಮಾರಕಾಸ್ತ್ರಗಳು, ಸ್ಪೋಟಕಗಳು,ಸ್ಫೋಟಕ ವಸ್ತುಗಳು,ವಿನಾಶಕಾರಿ ವಸ್ತುಗಳು ಹಾಗೂ ಇತರೆ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡುಬಂದಲ್ಲಿ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಯಾವುದೇ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರವಿರುತ್ತದೆ.ಅಂತಹ ಮಾರಕಾಸ್ತ್ರಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು.ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಲಾಗುವುದು.
ಸದರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ.
ವರದಿ:ಕೆ ಆರ್ ಶಂಕರ್ ಭದ್ರಾವತಿ