ಶಿವಮೊಗ್ಗ:ನಾಟಕಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೆ,ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ನಿವೃತ್ತ ಉಪನ್ಯಾಸಕ ಕೃಷ್ಣ ಉಪಾಧ್ಯಾಯ ಅಭಿಪ್ರಾಯಪಟ್ಟರು.
ಅಪರಂಜಿ ಅಭಿನಯ ಶಾಲೆ(ರಿ.),ಭೂಮಿಕಾ ಭದ್ರಾವತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ಯೋಜನೆಯಡಿ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಶಿರ ವೈಭವ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಚಲನಚಿತ್ರಗಳ ಗೀಳು ಹೆಚ್ಚಾಗಿ ನಾಟಕಗಳ ವೀಕ್ಷಣೆ ಕ್ಷೀಣಿಸುತ್ತಿದೆ.ಇಂತಹ ಸಂದರ್ಭದಲ್ಲೂ ಭದ್ರಾವತಿಯ ಅಪರಂಜಿ ಶಿವರಾಜ್ ರವರು ಎದೆಗುಂದದೆ ಹಾಸ್ಯ,ಸಾಮಾಜಿಕ ಕಳಕಳಿಯ ಹಾಗೂ ಜನರಿಗೆ ಜಾಗೃತಿ ಮೂಡಿಸುವಂತಹ ನಾಟಕಗಳನ್ನು ರಚಿಸಿ,ಪ್ರಚುರಪಡಿಸುತ್ತಿರುವುದು ಶ್ಲಾಘನೀಯವೆಂದರು.
ಭೂಮಿಕಾ ಭದ್ರಾವತಿ ಅಧ್ಯಕ್ಷ ಡಾ.ಕೃಷ್ಣ ಎಸ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಭೂಮಿಕಾ ವೇದಿಕೆ ನಡೆದುಬಂದ ದಾರಿ ಹಾಗೂ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಭೂಮಿಕಾ ಪ್ರಧಾನ ಕಾರ್ಯದರ್ಶಿ ಹಾಗೂ ಅನ್ಯಾಯಕಾರಿ ಬ್ರಹ್ಮ ಹಾಸ್ಯ ನಾಟಕದ ರಚನೆಕಾರ, ಅಪರಂಜಿ ಅಭಿನಯ ಶಾಲೆಯ ಮುಖ್ಯಸ್ಥ,ರಾಜ್ ಕಿರುತೆರೆ ಕಲಾವಿದ ಅಪರಂಜಿ ಶಿವರಾಜ್ ಆಶಯ ನುಡಿಗಳನ್ನಾಡಿದರು.
ಡಾ.ವೀಣಾಭಟ್ ಸರ್ವರನ್ನೂ ಸ್ವಾಗತಿಸಿದರು. ಕೋಶಾಧ್ಯಕ್ಷ ಸಿ ಎಲ್ ಮುನಿರಾಜು ಉದ್ಘಾಟಕ ಕೃಷ್ಣ ಉಪಾಧ್ಯಾಯರ ಪರಿಚಯ ಮಾಡಿಕೊಟ್ಟರು. ವೇದಿಕೆಯಲ್ಲಿ ಶಂಕರ ಮಠದ ಕೆ.ಎಸ್ ನಾಗರಾಜ್ ಉಪಸ್ಥಿತರಿದ್ದರು.ಡಾ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ವೇದಾವತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಅಪರಂಜಿ ಶಿವರಾಜ್ ರಚಿಸಿದ ಹಾಗೂ ಎಂ ಅನುಸೂಯ ನಿರ್ದೇಶನದ ನೈಜತೆಯನ್ನಾಧರಿಸಿದ “ಅನ್ಯಾಯಕಾರಿ ಬ್ರಹ್ಮ”ಹಾಸ್ಯ ನಾಟಕವನ್ನು ಅಪರಂಜಿ ಅಭಿನಯ ಶಾಲೆಯ ಕಲಾವಿದರು ಅಭಿನಯಿಸುವ ಮೂಲಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ