ಸಿಂಧನೂರು:ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಧಿಷ್ಟ ಗುರಿ ಮತ್ತು ಇದಕ್ಕೆ ಸ್ಫೂರ್ತಿ ಗುರು ಇದ್ದಾಗ ಅಂತಹ ವಿದ್ಯಾರ್ಥಿಗಳ ಜೀವನ ಯಶಸ್ವಿಯಾಗುತ್ತದೆ ಎಂದು ಮುಖ್ಯ ಶಿಕ್ಷಕ ಮಲ್ಲಪ್ಪ ಬಾದರ್ಲಿ ಹೇಳಿದರು.ಅವರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 10ನೇ ತರಗತಿ ವಿದ್ಯಾರ್ಥಿಗಳ 2023-24ನೇ ಶೈಕ್ಷಣಿಕ ಸಾಲಿನ ಬೀಳ್ಕೊಡುಗೆ ಮತು ಸರಸ್ವತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಇಂದಿನ ವಿದ್ಯಾರ್ಥಿ ಸಮೂಹ ವಿವಿಧ ಆಕರ್ಷಣೆಗಳಿಗೆ ಒಳಗಾಗಿ ತಮ್ಮ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯ ಮತ್ತು ಜೀವನವನ್ನು ವ್ಯರ್ಥಮಾಡುತ್ತಿದ್ದಾರೆ. ಇದರ ಬದಲಾಗಿ ಜೀವನದಲ್ಲಿ ಗುರಿಯೊಂದಿಗೆ ಸಾಧಿಸುವ ಛಲವನ್ನು ಇಟ್ಟುಕೊಂಡು ಮುಂದೆ ಸಾಗಬೇಕು.ಕಲಿಸಿದ ಗುರುಗಳಿಗೆ,ಹೆತ್ತು-ಹೊತ್ತು ಬೆಳೆಸಿದ ಪೋಷಕರಿಗೆ ಕೀರ್ತಿ ತರುವಂತಹ ಕೆಲಸ ನಿಮ್ಮಿಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಆಂಗ್ಲ ಭಾಷಾ ಶಿಕ್ಷಕರಾದ ವೀರೇಶ ಗೋನವಾರ ಮಾತನಾಡುತ್ತಾ,10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಕೋರ್ಸ್ ಗಳು ವಿದ್ಯಾರ್ಥಿ ಜೀವನದಲ್ಲಿ ಹೊಸ ತಿರುವನ್ನೇ ನೀಡುತ್ತವೆ.ಅಂಕಗಳ ಗಳಿಕೆಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಈ ವಿದ್ಯಾರ್ಥಿ ಜೀವನ ಮುಂದೆಂದೂ ಬರುವುದಿಲ್ಲ ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಪಡೆದುಕೊಳ್ಳಿ,ಮುಂದಿನ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಅಭ್ಯಾಸದಲ್ಲಿ ಆಸಕ್ತಿಯನ್ನು ಉಂಟು ಮಾಡಲು ಈ ಶಾಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶಾಲೆಯ ಪಸ್ತುತ ಶಿಕ್ಷಕರು ಮತ್ತು ಹಿಂದಿನ ಶಿಕ್ಷಕರು ಅನೇಕ ಪ್ರೋತ್ಸಾಹದಾಯಕ ಬಹುಮಾನಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಕರಾಟೆ ತರಬೇತುದಾರ ಖಾಶೀಮ್‌ಸಾಬ ಮಾತನಾಡುತ್ತಾ,ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಗಿದರೆ ಖಂಡಿತವಾಗಿಯೂ ಜೀವನದಲ್ಲಿ ಮುಂದೆ ಬರುತ್ತಾರೆ ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶವನ್ನು ಶಾಲೆಗೆ ನೀಡಬೇಕು ಎಂದು ಸಲಹೆ ನೀಡಿದರು.
ವೇದಿಕೆಯ ಮೇಲೆ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ವಿಶ್ವನಾಥರೆಡ್ಡಿ ಡಂಕನಕಲ್,ಮುಖಂಡರಾದ ಶಾಮಣ್ಣ,ಶಿಕ್ಷಕರಾದ ಸುಭಾಷಚಂದ್ರ ಪತ್ತಾರ, ರೂಪಾ,ಎಂ.ಮಾರುತಿ,ಬಸವರಾಜ ಸಿಬ್ಬಂದಿಗಳಾದ ರೂಪಾ ಕರ್ಣೆ,ಮಂಜುನಾಥ ಸೇರಿದಂತೆ ಇತರರಿದ್ದರು.
ಪ್ರತಿಭಾ ಪುರಸ್ಕಾರ:ಇದೇ ಸಂದರ್ಭದಲ್ಲಿ ಶಾಲೆಗೆ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಸ್ಥಾನಗಳನ್ನು ಪಡೆದ ಮೇಘ,ಭಾರತಿ ಮತ್ತು ವಿದ್ಯಾಶ್ರೀ ಇವರನ್ನು, ಈ ಶಾಲೆಯ ಹಿಂದಿನ ಸಮಾಜ ವಿಜ್ಞಾನ ಶಿಕ್ಷಕರಾದ ವೀರೇಶ ಅಂಗಡಿ ನಿವೃತ್ತ ಶಿಕ್ಷಕರು ಕೊಡಮಾಡಿದ ಸಮಾಜ ವಿಜ್ಞಾನ ವಿಷಯದಲ್ಲಿ ಅತಿ ಅಂಕಗಳನ್ನು ಪಡೆದ ಭಾರತಿ ಮತ್ತು ಹುಲಿಗೇಶ ಇವರಿಗೆ ಇಂಗ್ಲಿಷ್ ಭಾಷಾ ವಿಷಯದಲ್ಲಿ ಅಂಕ ಪಡೆದ ಮುಸ್ಕಾನ ಇವರಿಗೆ ವೀರೇಶ ಗೋನವಾರ ಶಿಕ್ಷಕರು ನಗದು ಮತ್ತು ಪ್ರಶಸ್ತಿ-ಫಲಕಗಳನ್ನು ನೀಡಿದರು.ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಭಾರತಿ ಮತ್ತು ಮೇಘ ಇವರಿಗೆ ಹಿಂದಿನ ಕನ್ನಡ ಶಿಕ್ಷಕ ಶರಣಪ್ಪ ಮುಳ್ಳೂರು ಪ್ರಶಸ್ತಿ ಫಲಕ ನೀಡಿದ ಹಿನ್ನಲೆಯಲ್ಲಿ ಶಾಲೆಯ ವತಿಯಿಂದ ಅಭಿನಂದಿಸಲಾಯಿತು.
ಸನ್ಮಾನ:ಶಾಲೆಯಲ್ಲಿ 8,9 ಮತ್ತು 10ನೇ ತರಗತಿಯ ಬಾಲಕಿಯರಿಗೆ ಕರಾಟೆಯ ತರಬೇತಿಯನ್ನು ನೀಡಿದ ಕರಾಟೆ ತರಬೇತುದಾರ ಖಾಸೀಮ್‌ಸಾಬ್ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.