ರಾಯಭಾಗ:ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ನಿರ್ವಹಿಸಿದ ಕಾಮಗಾರಿ ಬಿಲ್ ಮಂಜೂರು ಮಾಡಲು ಲಂಚ ಹಣ ಪಡೆಯುತ್ತಿದ್ದಾಗ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ರಾಯಬಾಗ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗ ರಾಯಬಾಗ ಸೆಕ್ಷನ್ ಎಇಇ ಪಂಡಿತ ವಾಘ ಲೋಕಾಯುಕ್ತ ದಾಳಿಗೆ ಸಿಕ್ಕಿಬಿದ್ದ ಅಧಿಕಾರಿ. ಗುತ್ತಿಗೆದಾರ ಮುತ್ತಪ್ಪ ಲಕ್ಷ್ಮಣ ಭಜಂತ್ರಿ ಎಂಬುವರು ಪಂಚಾಯತ್ ರಾಜ್ ಇಲಾಖೆಯಿಂದ 3 ಲಕ್ಷ ವೆಚ್ಚದಲ್ಲಿ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಖೇತಗೌಡರ ತೋಟ,ಮುಗಳಖೋಡದ ಶಾಲೆಯ ಶೌಚಾಲಯ ನಿರ್ಮಾಣ ಕಾಮಗಾರಿಯನ್ನು ಮುಕ್ತಾಯಗೊಳಿಸಿದ್ದರು.
ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಕಾಮಗಾರಿಯ ಬಗ್ಗೆ ಅಳತೆಯನ್ನು (ಎಂಬಿ) ದಾಖಲಿಸಿಕೊಂಡು ಬಿಲ್ ತಯಾರಿಸಿ ಕೊಡಲು ಹಾಗೂ ಬಿಲ್‌ಗೆ ಸಹಿ ಮಾಡಲು ಶೇ.5ರಷ್ಟು ಅಂದರೆ ₹12 ಸಾವಿರ ಲಂಚ ನೀಡಲು ತಿಳಿಸಿದ್ದರು. ಇದರಿಂದ ಬೇಸತ್ತ ಗುತ್ತಿಗೆದಾರ ಮುತ್ತಪ್ಪಾ ಭಜಂತ್ರಿ ಲೋಕಾಯುಕ್ತ ಠಾಣೆಗೆ ತೆರಳಿ ಈ ಕುರಿತು ದೂರು ನೀಡಿದ್ದರು.ಈ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನಮಂತರಾಯ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಭರತ ರೆಡ್ಡಿ,ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ನಿರಂಜನ ಪಾಟೀಲ,ಯು.ಎಸ್. ಅವಟಿ ಮತ್ತು ರವಿಕುಮಾರ ಧರ್ಮಟ್ಟಿ ಹಾಗೂ ಸಿಬ್ಬಂದಿ ರವಿ ಮಾವರಕರ,ವಿ ಬಿ ಬಸಕ್ರಿ,ರಾಜಶ್ರೀ ಭೋಸಲೆ,ಆರ್.ಬಿ.ಗೋಕಾಕ,ಸಂತೋಷ ಬೆಡಗ, ಗಿರೀಶ ಪಾಟೀಲ,ಬಸವರಾಜ ಕೊಡೊಳ್ಳಿ,ಅಭಿಜಿತ ಜಮಖಂಡಿ ದಾಳಿ ನಡೆಸಿದ ತಂಡದಲ್ಲಿದ್ದರು.
ವರದಿ-ಸಂಗಮೇಶ ಕಾಂಬಳೆ