ಕೊಪ್ಪಳ:ನಿಶ್ಚಿತವಾಗಿಯೂ ಅಂಜನಾದ್ರಿಯಿಂದ ರೈಲೊಂದು ಅಯೋಧ್ಯೆಗೆ ಹೋಗಲೇಬೇಕು ರಾಜ್ಯ ಸರ್ಕಾರವು ಅಭಿವೃದ್ಧಿಗೆ ಪೂರಕವಾಗಿದೆ.ಹೀಗಾಗಿ ಅಂಜನಾದ್ರಿ-ಅಯೋಧ್ಯೆ ರೈಲು ಯೋಜನೆಯ ಸಾಕಾರಕ್ಕೆ ಪ್ರಾಮಾಣಿಕವಾಗಿ ಸಹಕಾರ ನೀಡಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಹೇಳಿದರು.
ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಗಂಗಾವತಿ ತಾಲೂಕಿನ ಆನೆಗೊಂದಿಯ ಉತ್ಸವ ಮೈದಾನದಲ್ಲಿ ಮಾರ್ಚ್ 11ರಂದು ನಡೆದ ಐತಿಹಾಸಿಕ ಆನೆಗೊಂದಿ ಉತ್ಸವ-2024 ಉದ್ಘಾಟಿಸಿ ಅವರು ಅವರು ಮಾತನಾಡುತ್ತಾ ಅಖಂಡ ಗಂಗಾವತಿ ತಾಲೂಕು ಭತ್ತದ ಕಣಜವಾಗಿದೆ.ಈ ಭಾಗಕ್ಕೆ ರೈಸ್ ಟೆಕ್ನಾಲಜಿ ಪಾರ್ಕ್ ಅಗತ್ಯವಾಗಿದೆ.ಭತ್ತದಿಂದ ನಾವು ಬೇರೆ ಬೇರೆ ಉತ್ಪನ್ನ ಮಾಡಲು ಇಲ್ಲಿ ಅವಕಾಶವಿದೆ ಎಂದು ಭಾವಿಸಿ ರೈಸ್ ಟೆಕ್ನಾಲಜಿ ಪಾರ್ಕ್ ಆರಂಭದ ಸಾಹಸಕ್ಕೆ ಕೈ ಹಾಕಿದ್ದೇವೆ.ರೈಸ್ ಟೆಕ್ನಾಲಜಿ ಪಾರ್ಕ್ ಗೆ ಯೋಜಿಸಿದ್ದೇವೆ.ಇದಕ್ಕಾಗಿ 357 ಎಕರೆ ಭೂಮಿ ಮತ್ತು 157 ಕೋಟಿ ರೂ ಕೊಟ್ಟಿದ್ದೇವೆ.ಇದು ಇನ್ನು ಅಭಿವೃದ್ಧಿ ಆಗಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರದ ಸಹಕಾರ ಬೇಕು ಎಂದು ಸಚಿವರು ತಿಳಿಸಿದರು.
ಕೊಪ್ಪಳ ಜಿಲ್ಲೆಯು ಐತಿಹಾಸಿಕವಾಗಿ ವಿಶೇಷತೆ ಹೊಂದಿದೆ. ಕನಕಗಿರಿಯ ಶ್ರೀ ಕನಕಾಚಲಪತಿ ದೇವಾಲಯ,ಗಂಗಾವತಿಯ ಅಂಜನಾದ್ರಿ, ಕುಕನೂರಿನ ಮಹಾದೇವಾಲಯ ಹೀಗೆ ಹಲವಾರು ವಿಶೇಷತೆಗಳ ಪಟ್ಟಿಯು ಬೆಳೆಯುತ್ತದೆ.ವಿಜಯನಗರ ಅರಸರ ಕಾಲದ ರಾಜಧಾನಿಯಲ್ಲಿ ನಾವು ಈ ಉತ್ಸವ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಆನೆಗೊಂದಿ ಅಂದರೆ ಅದು ಬರೀ ಕೊಪ್ಪಳಕ್ಕೆ ಸೀಮಿತವಾಗಿಲ್ಲ; ಆನೆಗೊಂದಿ ಅಂಜನಾದ್ರಿ ಇಡೀ ರಾಜ್ಯಕ್ಕೆ ಚಿರಪರಿಚಿತವಾಗಿವೆ.ಬರೀ ಉತ್ಸವ ಆದರೆ ಸಾಲದು. ಇಲ್ಲಿನ ನಿಜವಾದ ಇತಿಹಾಸವನ್ನು ನಮ್ಮ ಯುವಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಸಚಿವರು ಹೇಳಿದರು.
ನಾವೆಲ್ಲರೂ ನೋಡಿ ಕಲಿಯುವಂತಹ ಆಡಳಿತವನ್ನು ಶ್ರೀರಂಗದೇವರಾಯಲು ಅವರು ಮಾಡಿದರು. ಶ್ರೀರಂಗದೇವರಾಯಲು ಅವರ ಪಕ್ಷನಿಷ್ಟೆ ನಮಗೆ ಆದರ್ಶಪ್ರಾಯವಾಗಿದೆ. ಅಂತಹ ಮಹನಿಯರಾದ ಹಿರಿಯರಾದ ಶ್ರೀರಂಗದೇವರಾಯಲು ಅವರ ಹೆಸರನ್ನು ಆನೆಗೊಂದಿ ಉತ್ಸವದ ಭವ್ಯ ವೇದಿಕೆಗೆ ಇಟ್ಟಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಇದಕ್ಕಾಗಿ ಶಾಸಕರಾದ ಜನಾರ್ಧನ ರೆಡ್ಡಿ ಅವರಿಗೆ ಮತ್ತು ಜಿಲ್ಳಾಡಳಿತಕ್ಕೆ ತಾವು ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.
ಅಂಜನಾದ್ರಿ ಅಭಿವೃದ್ಧಿಗೆ ಬದ್ಧ:ಇಡೀ ದೇಶದ ಜನರು ಗಂಗಾವತಿ ತಾಲೂಕಿನ ಅಂಜನಾದ್ರಿಯ ಕಡೆಗೆ ನೋಡುವ ಹಾಗೆ ನಾವು ಅಂಜನಾದ್ರಿಯನ್ನು ಅಭಿವೃದ್ಧಿಪಡಿಸುತ್ತೇವೆ.ಸಂಸದರು ಮತ್ತು ಶಾಸಕರ ಸಹಕಾರ ಪಡೆದು ಈ ಕಾರ್ಯ ಮಾಡುತ್ತೇವೆ ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿಗಳು,ಜಿಪಂ ಸಿಇಓ ಅವರಿಗೆ ಅಭಿನಂದನೆ:
ಆನೆಗೊಂದಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತ ಭಾಷಣ ಮಾಡಿದ ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ ಮತ್ತು ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಕನ್ನಡದಲ್ಲಿನ ಭಾಷಣದ ಬಗ್ಗೆ ವಿಷಯ ಪ್ರಸ್ತಾಪಿಸಿದ ಸಚಿವರು, ಬೇರೆ ಬೇರೆ ಪ್ರದೇಶಗಳಿಂದ ಬಂದಿರುವ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರು ಪ್ರಯತ್ನ ಮಾಡಿ ಕನ್ನಡದಲ್ಲಿ ಸ್ವಾಗತ ಭಾಷಣ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿರುವುದು ನಿಜಕ್ಕೂ ಅಭಿನಂದನೆಯ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ಅವರಿಗೆ ಅಭಿನಂದನೆ ತಿಳಿಸುವುದಾಗಿ ಅವರು ಹೇಳಿದರು.
ರಾಜಕೀಯ ಬೇಡ:ಕೊಪ್ಪಳ,ಕುಷ್ಟಗಿ,ಕನಕಗಿರಿ, ಕಾರಟಗಿ,ಗಂಗಾವತಿ,ಯಲಬುರ್ಗಾ,ಕುಕನೂರ ತಾಲೂಕಿನ ಜನರ ಋಣ ನಾವೆಲ್ಲರೂ ತೀರಿಸಬೇಕು. ಇದಕ್ಕಾಗಿ ನಾವೆಲ್ಲರೂ ಒಂದಾಗಿ ಹೋಗೋಣ. ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಸಚಿವರು ಹೇಳಿದರು.
ಸಂಸದರಾದ ಕರಡಿ ಸಂಗಣ್ಣ,ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ ಅವರು ಮಾತನಾಡಿದರು.ಶಾಸಕರಾದ ಜನಾರ್ಧನ ರೆಡ್ಡಿ ಅವರು ಅಧ್ಕಕ್ಷತೆ ವಹಿಸಿದ್ದರು.ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಪ್ರಾಸ್ತಾವಿಕ ಮಾತನಾಡಿದರು.ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಪಾಂಡೆಯ ಸ್ವಾಗತ ಮಾತುಗಳನ್ನಾಡಿದರು.
ಸಮಾರಂಭದಲ್ಲಿ ರಾಜವಂಶಸ್ಥರಾದ ಲಲಿತಾ ರಾಣಿ ಶ್ರೀರಂಗದೇವರಾಯಲು,ಶಾಸಕರಾದ ಜನಾರ್ಧನ ರೆಡ್ಡಿ ಅವರ ಧರ್ಮಪತ್ನಿ ಅರುಣಾ ಲಕ್ಷ್ಮೀ ಜನಾರ್ಧನ ರೆಡ್ಡಿ, ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕೆ.ಮಹಾದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮುಖಂಡರಾದ ಶ್ರೀನಾಥ ಬಿ., ಮಲ್ಲಿಕಾರ್ಜುನ ನಾಗಪ್ಪನವರ,ರಾಜಶೇಖರ ಹಿಟ್ನಾಳ, ವಿರುಪಾಕ್ಷಪ್ಪ ಸಿಂಗನಾಳ, ಹನುಮಂತಪ್ಪ ನಾಯಕ ಹಾಗೂ ಇತರರು ಇದ್ದರು.