ಮೂಲ ನಕ್ಷೆಯಂತೆ ಕಟ್ಟಡಗಳ ತೆರವು ಮಾಡಲು ನಿರ್ಲಕ್ಷ್ಯ:ವಿವಾದಗಳ ಕೇಂದ್ರಬಿಂದುವಾಗಿರುವ ಭದ್ರಾ ಹೊಸ ಸೇತುವೆ :
ಭದ್ರಾವತಿ:ಮೂಲ ನಕ್ಷೆಯಂತೆ ಕಟ್ಟಡಗಳ ತೆರವು ಮಾಡಲು ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ವಿವಾದಗಳ ಕೇಂದ್ರಬಿಂದುವಾಗಿರುವ ಭದ್ರಾ ಹೊಸ ಸೇತುವೆ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.
ನಗರದಲ್ಲಿ ಭದ್ರಾ ನದಿಗೆ ಅಡ್ಡಲಾಗಿ 7 ವರ್ಷಗಳಿಂದ ನಿರ್ಮಿಸುತ್ತಿರುವ ಹೊಸ ಸೇತುವೆ ನಿರ್ಮಾಣವನ್ನು ರಾತ್ರೋರಾತ್ರಿ ಹಳ್ಳ ಮುಚ್ಚಿ ಅವೈಜ್ಞಾನಿಕವಾಗಿ ಪೂರ್ಣಗೊಳಿಸುವ ಹುನ್ನಾರವನ್ನು ಸಾರ್ವಜನಿಕರು ಪ್ರತಿಭಟಿಸುವ ಮೂಲಕ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.
ಪ್ರಸ್ತುತ ಶಿಥಿಲಗೊಂಡಿರುವ 165 ವರ್ಷಗಳ ಹಳೆಯ ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಿಸಲು “ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ” ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.ಹೊಸ ಸೇತುವೆ ನಿರ್ಮಾಣಕ್ಕೆ ಸಂಪರ್ಕ ಕಲ್ಪಿಸಲು ನದಿ ದಂಡೆಯ ಮೇಲಿರುವ ವಾಣಿಜ್ಯ ಕಟ್ಟಡಗಳ ಸ್ವಲ್ಪ ಭಾಗವನ್ನು ತೆರವುಗೊಳಿಸಲು ಭೂ ಸ್ವಾಧೀನ ಪ್ರಕ್ರಿಯೆ ನಡೆಸಿದೆ. ಕೆಲವು ವಾಣಿಜ್ಯ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲಾಗಿದೆ ಮತ್ತೆ ಕೆಲವರು ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ತಕರಾರು ಮಾಡಿದ್ದಾರೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವಾಣಿಜ್ಯ ಕಟ್ಟಡ ಮಾಲೀಕರೊಂದಿಗೆ ಶಾಮೀಲಾಗಿ ಮಾರ್ಕಿಂಗ್ ಮಾಡಿರುವಂತೆ ಹಾಗೂ ಮೂಲ ನಕ್ಷೆಯಂತೆ ಕಟ್ಟಡಗಳನ್ನು ತೆರವು ಮಾಡದೆ,ಡೊಂಕವಾಗಿ ರಸ್ತೆಗೆ ಜೋಡಣೆ ಮಾಡಲು ಹಳ್ಳಕ್ಕೆ ಮಣ್ಣು ತುಂಬಿ ಕಾಮಗಾರಿ ಪೂರ್ಣಗೊಳಿಸಲು ಸಿದ್ಧತೆ ನಡೆಸಿದ್ದರು. ಈ ವಿಷಯ ತಿಳಿದ ಸಾರ್ವಜನಿಕರು ನಗರಸಭಾ ಸದಸ್ಯರುಗಳಾದ ಜಾರ್ಜ್ ಮತ್ತು ಆರ್.ಮೋಹನ್ ಕುಮಾರ್ ನೇತೃತ್ವದಲ್ಲಿ ಈ ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.ಜಲ್ಲಿ ಕಲ್ಲುಗಳನ್ನು ಹೊತ್ತು ತಂದಿದ್ದ ವಾಹನಗಳನ್ನು ಹಿಂದಕ್ಕೆ ಕಳಿಸಿದ್ದಾರೆ.
ಸೇತುವೆ ಕಾಮಗಾರಿಗಾಗಿ ಕಟ್ಟಡಗಳನ್ನು ತೆರವು ಮಾಡದೆ ಡೊಂಕಾಗಿ ತಿರುವು ಮಾಡಿ ಹಳೆಯ ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುವ ಅಪಘಾತ ವಲಯವಾಗಿ ಮಾರ್ಪಡಲಿದೆ.ಕಟ್ಟಡಗಳನ್ನು ಮಾರ್ಕಿಂಗ್ ನಂತೆ ತೆರವು ಮಾಡದೆ ಮೂಲ ನಕ್ಷೆಯನ್ನೇ ಬದಲು ಮಾಡಲಾಗಿದೆ.ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ರವರು ಮತ್ತು ನಗರಸಭೆಯ ಉಸ್ತುವಾರಿ ಹೊತ್ತಿರುವ ಸದಸ್ಯ ಶಾಸಕರ ಸಹೋದರ ಬಿ.ಕೆ ಮೋಹನ್ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಯಾರೂ ಪ್ರಶ್ನೆ ಮಾಡುತ್ತಿಲ್ಲ.ಪ್ರತಿಪಕ್ಷಗಳಾದ ಬಿಜೆಪಿ,ಜೆಡಿಎಸ್ ಪಕ್ಷಗಳ ಚುನಾಯಿತ ಪ್ರತಿನಿಧಿಗಳೂ ಸಹ ಈ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆಯ ಪೌರಾಯುಕ್ತ ಪ್ರಕಾಶ್ ಎಂ ಚೆನ್ನಪ್ಪನವರ್ ಅವರನ್ನು ಪ್ರಶ್ನಿಸಿದಾಗ ಈ ಕಾಮಗಾರಿಯು ನಗರಸಭೆಗೆ ಸಂಬಂಧಪಟ್ಟಿದ್ದಲ್ಲ , ಇದು ಲೋಕೋಪಯೋಗಿ ಇಲಾಖೆಗೆ ಸೇರಿದ್ದು ಎಂದು ತಿಳಿಸಿದ್ದಾರೆ.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಬಸವರಾಜ್ ಅವರನ್ನು ಪ್ರಶ್ನೆ ಮಾಡಿದರೆ ಈ ಕಾಮಗಾರಿಯು ನಮಗೆ ಸೇರಿದ್ದಲ್ಲ,ಶಿವಮೊಗ್ಗದ ಕೆ ಆರ್ ಡಿ ಸಿ ಎಲ್ ನ ಸಹಾಯಕ ಕಾರ್ಯಪಾಲಕ ಅಭಿಯಂತರ ಲಿಂಗರಾಜ್ ಅವರಿಗೆ ಸೇರಿದ್ದು ಎಂದು ಹೇಳುತ್ತಾರೆ.ಕಟ್ಟಡಗಳನ್ನು ಮೂಲ ನಕ್ಷೆ ಹಾಗೂ ಮಾರ್ಕಿಂಗ್ ನಂತೆ ತೆರವು ಮಾಡದ ಹೊರತು ಕಾಮಗಾರಿ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು,ಅವೈಜ್ಞಾನಿಕ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.ಮುಂದಿನ ದಿನಗಳಲ್ಲಿ ಕಾಮಗಾರಿ ಸಮರ್ಪಕವಾಗಿ ನಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.
ಮಳೆಗಾಲ ಆರಂಭವಾದರೆ ನಗರದ ಕೆ ಎಸ್ ಆರ್ ಟಿ ಸಿ ಮುಖ್ಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸೇತುವೆ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ ಮಾಡಿದರೆ ಸಹಜವಾಗಿ ಮುಳುಗಿ ಹೋಗುತ್ತದೆ.
ಸಾರ್ವಜನಿಕರ,ವಾಹನಗಳ ಸುಗಮ ಸಂಚಾರಕ್ಕಾಗಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದ್ದು,ಮೂಲ ನಕ್ಷೆಯಲ್ಲಿರುವಂತೆ ಸೇತುವೆ ಕಾಮಗಾರಿ ಸುಸಜ್ಜಿತವಾಗಿ ಶೀಘ್ರ ಮುಗಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಅಗತ್ಯವಿದೆ.
ವರದಿ:ಕೆ ಆರ್ ಶಂಕರ್ ಭದ್ರಾವತಿ